×
Ad

ಕಾಸರಗೋಡಿನಲ್ಲಿ ಅಂತ್ಯೋದಯ ರೈಲು ನಿಲುಗಡೆ: ಸಂಸದ ಕರುಣಾಕರಣ್ ಸಾಧನೆ; ಸಿಪಿಎಂ

Update: 2018-06-29 23:14 IST

ಕಾಸರಗೋಡು, ಜೂ.29: ಅಂತ್ಯೋದಯ ರೈಲು ಕಾಸರಗೋಡಿನಲ್ಲಿ ನಿಲುಗಡೆ ಸಂಸದ ಪಿ.ಕರುಣಾಕರಣ್ ಅವರ ಸಾಧನೆಯಾಗಿದೆ ಎಂದು ಸಿಪಿಎಂ ಜಿಲ್ಲಾ ಘಟಕ ತಿಳಿಸಿದೆ.

ಕೇರಳದಲ್ಲಿ ಅಂತ್ಯೋದಯ ರೈಲು ಸಂಚಾರಕ್ಕೆ ಸಂಸದ ಕರುಣಾಕರಣ್ ಕಾರಣ ಎಂಬುದಕ್ಕೆ ರೈಲ್ವೆ ಸಚಿವರು ನೀಡಿದ ಪತ್ರ ಸಾಕ್ಷಿಯಾಗಿದೆ. ಕಾಸರಗೋಡಿನಲ್ಲಿ ಅಂತ್ಯೋದಯ ರೈಲು ನಿಲುಗಡೆ ಸಾಧ್ಯವಿಲ್ಲವೆಂದು ತಿಳಿದ ಕೂಡಲೇ ಸಂಸದರು, ರೈಲು ನಿಲುಗಡೆಯಾಗದಿದ್ದರೆ ಜುಲೈ 1ರಿಂದ ಸತ್ಯಾಗ್ರಹ ನಡೆಸುವುದಾಗಿ ಕೇಂದ್ರ ರೈಲ್ವೆ ಸಚಿವ, ಲೋಕಸಭಾ ಸಭಾಪತಿ, ಪ್ರಧಾನಮಂತ್ರಿಗೆ ಎಚ್ಚರಿಕೆ ನೀಡಿದ್ದರು. ಇದರ ಪರಿಣಾಮ ಜೂ.28ರಂದು ಸಂಜೆ 7:30ಕ್ಕೆ ಸಂಸದರನ್ನು ರೈಲ್ವೆ ಸಚಿವರು ಮಾತುಕತೆಗೆ ಅಹ್ವಾನಿಸಿ ರೈಲು ನಿಲುಗಡೆಯ ಬಗ್ಗೆ ಲಿಖಿತ ಭರಸೆ ನೀಡಿದ್ದರು ಎಂದು ಸಿಪಿಎಂ ತಿಳಿಸಿದೆ.

ಬಿಜೆಪಿ ಜಿಲ್ಲಾ ಅಧ್ಯಕ್ಷರ ಪತ್ರಿಕಾ ಪ್ರಕಟನೆ ಅವರ ಹತಾಶೆಯನ್ನು ತೋರಿಸುತ್ತದೆ. ಈ ರೀತಿಯ ಪತ್ರಿಕಾ ಪ್ರಕಟನೆಯ ಮೂಲಕ ಕೇರಳದ ಬಗ್ಗೆ ಮೋದಿ ಸರಕಾರ ಹಾಗೂ ರೈಲ್ವೆ ಇಲಾಖೆಯ ಮಲತಾಯಿ ಧೋರಣೆಯನ್ನು ಮರೆಮಾಚಲು ಅವರು ಪ್ರಯತ್ನಿುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ರೈಲಿನ ಸಮಯ ಪಟ್ಟಿಯಿಂದ ಕಾಸರಗೋಡಿನ ಹೆಸರನ್ನು ಎಡಪಕ್ಷಗಳ ಕಾರ್ಮಿಕ ಮುಖಂಡರು ರದ್ದುಗೊಳಿಸಿದಲ್ಲಿ, ಕೇಂದ್ರ ರೈಲ್ವೆ ಸಚಿವರಿಗೆ ಅದನ್ನು ಮರು ಸ್ಥಾಪಿಸುವುದಕ್ಕೆ ಯಾಕೆ ಸಾಧ್ಯವಾಗಿಲ್ಲ? ಎಂದು ತಿಳಿಸಿರುವ ಸಿಪಿಎಂ, ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜಿಲ್ಲೆಗೆ ತರುವುದರಲ್ಲಿ ಪಿ.ಕರುಣಾಕರಣ್ ಶ್ರಮ ಅಪಾರವಾಗಿದೆ. ಅದನ್ನು ಸಹಿಸಲು ಸಾಧ್ಯವಾಗದ ಬಿಜೆಪಿ ಅಪಪ್ರಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News