×
Ad

ರಾ.ಹೆದ್ದಾರಿ ದುರಸ್ತಿ ಮಾಡಿ; ಇಲ್ಲ ಟೋಲ್ ಸಂಗ್ರಹ ನಿಲ್ಲಿಸಿ: ಉಡುಪಿ ಜಿಪಂನಲ್ಲಿ ಆಕ್ರೋಶಿತ ಸದಸ್ಯರಿಂದ ನಿರ್ಣಯ

Update: 2018-06-30 21:01 IST

ಮಣಿಪಾಲ, ಜೂ.30: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಸಮರ್ಪಕವಾಗಿಲ್ಲ. ಇನ್ನೂ ಪೂರ್ಣ ಗೊಂಡಿಲ್ಲ. ಮಳೆಗಾಲದಲ್ಲಿ ಹೆದ್ದಾರಿ ಯುದ್ದಕ್ಕೂ ಹೊಂಡ-ಗುಂಡಿಗಳಿವೆ. ಈ ಬಗ್ಗೆ ದೂರು ನೀಡಿದರೂ ಯಾರೂ ಸ್ಪಂದಿಸಿ ದುರಸ್ತಿ ಮಾಡುತ್ತಿಲ್ಲ. ಆದ್ದರಿಂದ ಹೆದ್ದಾರಿ ದುರಸ್ತಿ ಮಾಡುವವರೆಗೆ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಶನಿವಾರ ನಡೆದ ಉಡುಪಿ ಜಿಪಂನ 12ನೇ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಳ ನಿರ್ಣಯ ಕೈಗೊಂಡರು.

ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಇಂದಿನ ಸಾಮಾನ್ಯ ಸಭೆಯಲ್ಲಿ, ಸುರತ್ಕಲ್‌ನಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿಯ ನಿಧಾನಗತಿ ಕಾಮಗಾರಿ, ಈ ಕುರಿತು ಯಾವುದೇ ಸ್ಪಂದನೆಯನ್ನು ತೋರಿಸದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ನಡೆಸುತ್ತಿರುವ ನವಯುಗ ಕಂಪೆನಿಯ ಅಧಿಕಾರಿಗಳ ವರ್ತನೆಯ ವಿರುದ್ಧ ಸದಸ್ಯರು ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿದ ಜಿಪಂ ಕಾಂಗ್ರೆಸ್ ಸದಸ್ಯ ಜನಾರ್ದನ ತೋನ್ಸೆ, ಹೆದ್ದಾರಿಯ ಅಸಮರ್ಪಕ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಉಡುಪಿ ಸಂತೆಕಟ್ಟೆ ಭಾಗದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಪಾದಚಾರಿ ಮೇಲ್ಸೇತುವೆ, ಬಸ್ಸು ನಿಲ್ದಾಣ ನಿರ್ಮಾಣ ಏನಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಬಿಜೆಪಿಯ ಗೀತಾಂಜಲಿ ಸುವರ್ಣ ಕೂಡ ರಸ್ತೆ ದುರಸ್ತಿ ಮಾಡುತ್ತಿಲ್ಲ. ಜಿಪಂ ಸಭೆಗೆ ಕನ್ನಡವೇ ಬಾರದ ಅಧಿಕಾರಿಗಳನ್ನು ಕಳುಹಿಸಿ ನಮ್ಮ ದೂರನ್ನು ಕಡೆಗಣಿಸಲಾಗುತ್ತಿದೆ. ರಸ್ತೆಗಳಲ್ಲಿ ಗುಂಡಿ ಬಿದ್ದು ಅಪಘಾತಗಳಾಗುತ್ತಿದ್ದು, ಪಾಟ್‌ಹೋಲ್‌ಗಳನ್ನೂ ದುರಸ್ತಿ ಮಾಡುತ್ತಿಲ್ಲ. ಇದರಿಂದ ಅಲ್ಲಲ್ಲಿ ಸಾವು-ನೋವುಗಳುಂಟಾಗುತಿದ್ದು, ಸಂಚಾರಕ್ಕೂ ಅಡಚಣೆ ಯಾಗುತ್ತಿದೆ ಎಂದು ದೂರಿದರು.

ಕಳೆದ ಹಲವು ತಿಂಗಳುಗಳಿಂದ ಈ ಬಗ್ಗೆ ನಾವು ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರೂ, ಯಾವುದೇ ಪರಿಹಾರ ಸಿಗುತ್ತಿಲ್ಲ ಎಂದು ಹಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಭೆಯಲ್ಲಿ ಉಸ್ಥಿತರಿದ್ದ ಸ್ವತಂತ್ರ ಇಂಜಿನಿಯರ್ ಗುರುರಾಜ್ ಮಾತನಾಡಿ, ಹೆದ್ದಾರಿಯನ್ನು ಪರಿಶೀಲಿಸಿ ನಾವು ಎಲ್ಲಾ ಸಮಸ್ಯೆಗಳ ಕುರಿತು ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿದ್ದೇವೆ. ಆದರೆ ಅದನ್ನು ದುರಸ್ತಿ ಪಡಿಸುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು.
ಈ ಉತ್ತರದಿಂದ ಕೆರಳಿದ ಜನಾರ್ದನ ತೋನ್ಸೆ ರಾ.ಹೆದ್ದಾರಿಗೆ ಸಂಬಂಧಿಸಿ ಪ್ರತ್ಯೇಕ ಸಭೆ ಕರೆಯುವಂತೆ ಪದೇ ಪದೇ ಮನವಿ ಮಾಡಿದರು. ಶಾಸಕ ರಘುಪತಿ ಭಟ್ ಮಾತನಾಡಿ, ಹೆದ್ದಾರಿ ದುರಸ್ತಿಯನ್ನೂ ಮಾಡದೆ ಟೋಲ್ ಸಂಗ್ರಹಿಸುವುದು ಬೇಡ. ಈ ಸಭೆಯಲ್ಲಿ ಜಿಲ್ಲೆಯ ಎರಡು ಟೋಲ್ ಕೇಂದ್ರ ಗಳನ್ನು ಮುಚ್ಚುವ ನಿರ್ಣಯ ಕೈಗೊಂಡು, ಯಾವುದೇ ಭದ್ರತೆ ಒದಗಿಸದಂತೆ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಮನವಿ ಮಾಡೋಣ ಎಂದು ಸಲಹೆ ನೀಡಿದರು. ಅದರಂತೆ ಹೆದ್ದಾರಿ ದುರಸ್ತಿಗೊಳ್ಳುವವರೆಗೆ ಟೋಲ್ ಸ್ಥಗಿತಕ್ಕೆ ನಿರ್ಣಯ ಕೈಗೊಳ್ಳಲಾಯಿತು.

ಪಿಎಚ್‌ಸಿ ಖಾಸಗಿಗೆ ನಿರ್ಣಯ: ಜಿಲ್ಲೆಯ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಹಾಗೂ ಸೌಲಭ್ಯಗಳ ಕೊರತೆ ಇದ್ದು, ಅಂತಹ ಆಸ್ಪತ್ರೆಗಳನ್ನು, ಖಾಸಗಿ ವೈದ್ಯಕೀಯ ವಿದ್ಯಾಲಯಗಳಿಗೆ ಮತ್ತು ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ ನಿರ್ವಹಣೆ ಮಾಡಲು ನೀಡಿದರೆ, ಆ ಸಂಸ್ಥೆಗಳ ವೈದ್ಯರ ಸೇವೆ ಜನರಿಗೆ ದೊರೆಯುತ್ತದೆ ಎಂಬ ಶಾಸಕ ರಘುಪತಿ ಭಟ್ ಅವರ ಸಲಹೆಯ ಕುರಿಂತೆಯೂ ಜಿಪಂ ನಿರ್ಣಯ ಕೈಗೊಂಡಿತು.

ಉಡುಪಿಯಲ್ಲಿ ಖಾಸಗಿಯವರು ನಿರ್ಮಿಸಿ, ನಿರ್ವಹಿಸಲಿರುವ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಉಸ್ತುವಾರಿ ಜಿಲ್ಲಾ ಸರ್ಜನ್ ಅಡಿಯಲ್ಲಿ ಬರಬೇಕು. ಪ್ರಸ್ತುತ 70 ಹಾಸಿಗೆಗಳ ಆಸ್ಪತ್ರೆಯಲ್ಲಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ಉಳಿಸಿಕೊಂಡು, ಉಳಿದ 130 ಹಾಸಿಗೆಗಳ ನಿರ್ವಹಣೆಯನ್ನು ಖಾಸಗಿಗೆ ನೀಡಬೇಕು. ಒಟ್ಟಾರೆಯಾಗಿ ಇಡೀ ಆಸ್ಪತ್ರೆ ಜಿಲ್ಲಾ ಸರ್ಜನ್‌ರ ಉಸ್ತುವಾರಿಯಲ್ಲಿರುವಂತೆ ನೋಡಿಕೊಳ್ಳಬೇಕು. ಸಂಪೂರ್ಣ ಆಸ್ಪತ್ರೆ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಿದರೆ ಮುಂದೆ ಸಮಸ್ಯೆಯಾಗಲಿದೆ. ಹೀಗಾಗಿ ಈ ಕುರಿತು ಇಲ್ಲಿ ನಿರ್ಣಯ ಮಾಡಿ ಕಳುಹಿಸಿದರೆ ವಿಧಾನಸಭೆಯಲ್ಲಿ ಚರ್ಚಿಸಲಾಗುವುದು ಎಂದು ರಘುಪತಿ ಭಟ್ ನುಡಿದರು.

ಜಿಲ್ಲೆಯಲ್ಲಿ ತೀವ್ರವಾಗಿರುವ ಮರಳು ಸಮಸ್ಯೆ ಕುರಿತಂತೆ ಇಂದೂ ಸದಸ್ಯರು ಸುದೀರ್ಘ ಚರ್ಚೆ ನಡೆಸಿದರು. ಎಲ್ಲಾ ಪೂರ್ವ ಸಿದ್ಧತೆ ಮಾಡಿಟ್ಟುಕೊಂಡು ಮರಳುಗಾರಿಕೆಗೆ ಬೇಕಾದ ಅನುಮತಿಯನ್ನು ಆಗಸ್ಟ್ ಮೊದಲ ವಾರದಲ್ಲಿ ನೀಡುವಂತೆ ಹಾಗೂ ಜಿಲ್ಲೆಯಲ್ಲಿ ಮರಳು ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ಶಾಲಾಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯ ಪುಸ್ತಕ ಪೂರೈಕೆ ಯಾಗದೇ ತೊಂದರೆಯಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸದಸ್ಯೆ ಶಿಲ್ಪಾ ಸುವರ್ಣ ಕೋರಿದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ಶೇಷಶಯನ, ಜಿಲ್ಲೆಯಲ್ಲಿ ಶೇ.86 ರಷ್ಟು ಪುಸ್ತಕಗಳ ವಿತರಣೆ ಈಗಾಗಲೆ ಆಗಿದೆ. ನಿನ್ನೆ 3 ಲೋಡ್ ಪುಸ್ತಕ ಬಂದಿದ್ದು ಅವುಗಳನ್ನು ವಿತರಿಸಿದರೆ ಸಮಸ್ಯೆ ಪರಿಹಾರವಾಗಲಿದೆ. ಕೂಡಲೇ ಕ್ರವು ಕೈಗೊಳ್ಳಲಾಗುವುದು ಎಂದರು.

ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಸೈಕಲ್ ಹಾಗೂ ಶೂಗಳನ್ನು ವಿತರಿಸುವಂತೆ ಹಾಗೂ ಅನುಪಯುಕ್ತ ಶಾಲಾ ಕಟ್ಟಡಗಳನ್ನು ವಿಲೇವಾರಿ ಮಾಡುವಲ್ಲಿ ಸೂಕ್ತ ನಿಯಮಗಳನ್ನು ಪಾಲಿಸುವಂತೆ ಅಧ್ಯಕ್ಷ ದಿನಕರ ಬಾಬು ಹೇಳಿದರು.

ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸೂಕ್ತ ಪರಿಹಾರ ವಿತರಿಸುವಂತೆ ಸದಸ್ಯೆ ಗೀತಾಂಜಲಿ ಸುವರ್ಣ ಕೋರಿದರು. ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಇನ್ನೂ ಪ್ರಾಕೃತಿಕ ವಿಕೋಪ ನಿರ್ವಹಣೆ ತಂಡಗಳ ರಚನೆ ಆಗಿಲ್ಲ. ತಂಡ ರಚಿಸುವಾಗ ಸ್ಥಳಿಯ ಜನಪ್ರತಿನಿಧಿಗಳನ್ನು ಸೇರಿಸಿಕೊಳ್ಳುವಂತೆ ಜನಾರ್ದನ ತೋನ್ಸೆ ಹೇಳಿದರು.

ಹಾವಂಜೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳು ರಸ್ತೆಗೆ ಅಡ್ಡ ಬಂದು ಅಪಘಾತಗಳಾಗುತ್ತಿದ್ದು, ಅರಣ್ಯ ಇಲಾಖೆ ವತಿಯಿಂದ ಸೂಕ್ತ ಬೇಲಿ ಅಳವಡಿಸುವಂತೆ ಜನಾರ್ದನ ತೋನ್ಸೆ ಹಾಗೂ ಉಡುಪಿ ತಾಪಂ ಅದ್ಯಕ್ಷೆ ನಳನಿ ಪ್ರದೀಪ್ ರಾವ್ ಮನವಿ ಮಾಡಿದರು.

ಸಭೆಯ ಪ್ರಾರಂಭದಲ್ಲಿ ಯೋಗಾಸನದಲ್ಲಿ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರ ವಾಗಿರುವ ಸೈಂಟ್ ಸಿಸಿಲೀಸ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಇವರನ್ನು ಜಿಪಂ ವತಿಯಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಪು ಶಾಸಕ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News