×
Ad

ಶಿಕ್ಷಕರ ರಕ್ಷಣೆಗೆ ಕಾನೂನು ಜಾರಿಗೆ ಪ್ರಯತ್ನ: ಆಯನೂರು ಮಂಜುನಾಥ್

Update: 2018-06-30 21:31 IST

ಉಡುಪಿ, ಜೂ.30: ತಪ್ಪು ಮಾಡದಿದ್ದರೂ ಸುಳ್ಳು ಆರೋಪಗಳನ್ನು ಹೊರಿಸಿ ಶಿಕ್ಷಕರ ಮೇಲೆ ಅನಾವಶ್ಯಕವಾಗಿ ಹಲ್ಲೆಗಳು ನಡೆಯುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವೈದ್ಯರಂತೆ ಶಿಕ್ಷಕರ ರಕ್ಷಣೆಗೆ ಕಾನೂನನ್ನು ನನ್ನ ಆರು ವರ್ಷಗಳ ಅವಧಿಯೊಳಗೆ ಸದನದಲ್ಲಿ ಜಾರಿಗೆ ತರುವಂತೆ ಪ್ರಯತ್ನಿಸಲಾ ಗುವುದು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಉಡುಪಿ ಜಿಲ್ಲಾ ಘಟಕ ಮತ್ತು ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ ಆಶ್ರಯ ದಲ್ಲಿ ಶನಿವಾರ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾದ 2018-19ನೆ ಸಾಲಿನ ಶೈಕ್ಷಣಿಕ ಸಮ್ಮೇಳನ, ಪ್ರತಿಭಾ ಪುರಸ್ಕಾರ, ಸನ್ಮಾನ ಮತ್ತು ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜನಸಾಮಾನ್ಯರಿಗೆ ಸಿಗುವ ಸಾಮಾಜಿಕ ರಕ್ಷಣಾ ಯೋಜನೆಗಳು ಶಿಕ್ಷಕರಿಗೆ ಸಿಗುತ್ತಿಲ್ಲ. ಶಿಕ್ಷಕಿಯರಿಗೆ ಹೆರಿಗೆ ರಜೆ ಇಲ್ಲ, ರಜೆ ಕೊಟ್ಟರೂ ಸಂಬಳ ಇಲ್ಲ. ಹೀಗೆ ಶಿಕ್ಷಕರು ಎಲ್ಲ ರೀತಿಯ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಪಾಠ ಮಾಡಲು ಇರುವ ಶಿಕ್ಷಕರನ್ನು ಅಡುಗೆ ಸೇರಿದಂತೆ ಎಲ್ಲ ಕೆಲಸಗಳಿಗೂ ಬಳಸಿ ಕೊಳ್ಳಲಾಗುತ್ತಿದೆ. ಶಿಕ್ಷಕರು ಒತ್ತಡ ಹಾಗೂ ಬಿಡುವಿಲ್ಲದೆ ಮಾಡುತ್ತಿರುವ ಕೆಲಸ ಗಳಿಂದ ಅವರ ಜ್ಞಾನ ವೃದ್ಧಿ ಸಾಧ್ಯವಾಗುತ್ತಿಲ್ಲ. ಯಾವುದೇ ಇಲಾಖೆಯಲ್ಲಿ ಇರದ ಕೆಲಸ ಹೊರೆ ಈ ಶಿಕ್ಷಕರ ಕ್ಷೇತ್ರದಲ್ಲಿ ಯಾಕೆ ಎಂದು ಅವರು ಪ್ರಶ್ನಿಸಿದರು.

ತಮ್ಮ ಮೇಲೆ ನಡೆಯುತ್ತಿರುವ ಶೋಷಣೆ, ಅನ್ಯಾಯವನ್ನು ಪ್ರತಿಭಟಿಸಲು ಆಗದ ಶಿಕ್ಷಕರಿಗೆ, ಮಕ್ಕಳಿಗೆ ಝಾನ್ಸಿ ರಾಣಿ ರೀತಿ ಹೋರಾಟ ಮಾಡಬೇಕು, ಟಿಪ್ಪು ಸುಲ್ತಾನ್ ರೀತಿ ಇರಬೇಕು ಎಂದು ಪಾಠ ಮಾಡಲು ಏನು ನೈತಿಕತೆ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತಂದರೆ ಮಾತ್ರ ಶಿಕ್ಷಕರ ಎಲ್ಲರ ಎಲ್ಲ ಸಮಸ್ಯೆ ಬಗೆಹರಿಯಲು ಸಾಧ್ಯ. ಗುಲಾಮಿತನದಿಂದ ಶಿಕ್ಷಕರ ಕ್ಷೇತ್ರವನ್ನು ಮುಕ್ತ ಮಾಡಬೇಕಾಗಿರುವುದು ಇಂದಿನ ಅಗತ್ಯ ಎಂದರು.

ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ ಮಾತ ನಾಡಿದರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು. ಈ ಸಂದರ್ಭದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರ ಸಂಘದ ವಿವಿಧ ಬೇಡಿಕೆಗಳನ್ನು ಶಾಸಕರುಗಳಿಗೆ ಸಲ್ಲಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಚ್.ಕೆ.ಮಂಜುನಾಥ್, ಮುಖ್ಯೋಪಾಧ್ಯಾಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎನ್.ಚಂದ್ರೆಗೌಡ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮಾತನಾಡಿದರು.

ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ದಿನಕರ ಆರ್.ಶೆಟ್ಟಿ ಉಪಸ್ಥಿತ ರಿದ್ದರು. ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ ಸ್ವಾಗತಿಸಿದರು. ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅವೈಜ್ಞಾನಿಕ ಸುತ್ತೋಲೆ: ಬೋಜೇಗೌಡ ಗರಂ

ಶಿಕ್ಷಕರ ರಜಾದಿನಗಳನ್ನು ಕಡಿತಗೊಳಿಸುವ, ವಾರದಲ್ಲಿ 16ಗಂಟೆಗಳ ಬದಲು 24 ಗಂಟೆಗಳ ಕಾಲ ಪಾಠ ಮಾಡಬೇಕೆಂಬ ಅವೈಜ್ಞಾನಿಕ ಸುತ್ತೋಲೆಗಳನ್ನು ಐಎಎಸ್ ಅಧಿಕಾರಿಗಳು ಹೊರಡಿಸುತ್ತಿದ್ದು, ಇದರಿಂದ ಶಿಕ್ಷಕರು ಹಾಗೂ ಉಪನ್ಯಾಸಕರು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಐಎಎಸ್ ಅಧಿಕಾರಿಗಳು ಇತಿಮಿತಿಯಲ್ಲಿ ಹೋಗದಿದ್ದರೆ ಅವರ ವಿರುದ್ಧ ಸದನದಲ್ಲಿ ಧ್ವನಿ ಎತ್ತಲಾಗುವುದು ಎಂದು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್. ಎಲ್.ಬೋಜೇಗೌಡ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News