ಕೇಂದ್ರ ಸರಕಾರದ ನೀತಿಯಿಂದ ವ್ಯವಹಾರಕ್ಕೆ ತೊಡಕು: ಸ್ಟೀಲ್ ಟ್ರೇಡರ್ಸ್ ಅಸೋಸಿಯೇಶನ್‌ನಿಂದ ಎಸ್ಪಿಗೆ ಮನವಿ
ಮಂಗಳೂರು, ಜೂ.30: ಕೇಂದ್ರ ಸರಕಾರದ ನೂತನ ನೀತಿಯಿಂದ ವ್ಯವಹಾರದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ನಿವಾರಣೆಗೆ ಸಹಕಾರ ನೀಡುವಂತೆ ಕಬ್ಬಿಣ ಮತ್ತು ಉಕ್ಕಿನ ಪ್ರಮುಖ ಉದ್ಯಮಿಗಳ ಸಂಘಟನೆಯಾದ ಸ್ಟೀಲ್ ಟ್ರೇಡರ್ಸ್ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸ್ಟೀಲ್ ಉದ್ಯಮ ಅತ್ಯಂತ ಕಡಿಮೆ ಲಾಭದಾಯಕ ಉದ್ಯಮವಾಗಿದೆ. ಇದೀಗ ಕೇಂದ್ರ ಸರಕಾರದ ನೀತಿಯಿಂದಾಗಿ ಚೆಕ್ ಮೂಲಕ ಗ್ರಾಹಕರಿಂದ ವ್ಯವಹರಿಸುವ ಅನಿವಾರ್ಯತೆ ಉಂಟಾಗಿದೆ. ಇದರಿಂದ ಕೆಲ ಸಂದರ್ಭಗಳಲ್ಲಿ ಚೆಕ್ ಬೌನ್ಸ್ ಆಗುತ್ತಿದ್ದು, ವಸೂಲಿಗಾಗಿ ಅಲೆದಾಡುವ, ನ್ಯಾಯಾಲಯ ವ್ಯಾಜ್ಯಗಳಿಗೆ ಸಮಯ ವ್ಯಯವಾಗುವ ಸಂದರ್ಭ ನಿರ್ಮಾಣವಾಗುತ್ತದೆ. ಇದರಿಂದ ವ್ಯಾಪಾರ ವಹಿವಾಟಿಗೆ ತೊಡಕುಂಟಾಗುತ್ತದೆ. ಇಂತಹ ಯಾವುದೇ ಪರಿಸ್ಥಿತಿ ನಿರ್ಮಾಣವಾಗದಂತಾಗಲು ಪೊಲೀಸ್ ಇಲಾಖೆಯ ಸಹಕಾರವನ್ನು ಕೋರಲಾಗಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಅಸೋಸಿಯೇಶನ್ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.