ಅಳಿವಿನ ಅಂಚಿನಲ್ಲಿರುವ ಸಿಹಿ ನೀರಿನ ಮೀನು ಮರಿಗಳ ಮೂಲ ಆವಾಸಕ್ಕೆ ಬಿಡುಗಡೆ
ಮಂಗಳೂರು, ಜೂ.30: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಸಂತಾನೋತ್ಪತ್ತಿ ಮಾಡಿ ಬೆಳೆಸಿದ ಪಶ್ಚಿಮ ಘಟ್ಟದ ಅಳಿವಿನ ಅಂಚಿನಲ್ಲಿರುವ ಸಿಹಿ ನೀರಿನ ಮತ್ಸ್ಯಪ್ರಬೇಧಗಳ ಮರಿಗಳನ್ನು ಅವುಗಳ ಮೂಲ ಆವಾಸಕ್ಕೆ ಬಿಡುವ ಕಾರ್ಯಕ್ರಮವು ರಾಜ್ಯ ಅರಣ್ಯ ಇಲಾಖೆ, ಮೀನುಗಾರಿಕಾ ಇಲಾಖೆ, ದ.ಕ.ಜಿಪಂ ಸಹಯೋಗದೊಂದಿಗೆ ಗುರುವಾರ ವೇಣೂರು ಸಮೀಪದ ನಾರಾವಿಯಲ್ಲಿರುವ ಅರಣ್ಯ ವಿಶ್ರಾಂತಿ ಗೃಹದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿದೇಶಕ ವಿ.ಪ್ರಸನ್ನ ನಿಸರ್ಗಧಾಮದ ಲೇಕ್‌ಗಾರ್ಡನ್‌ನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪಶ್ಚಿಮ ಘಟ್ಟದ ಅಳಿವಿನ ಅಂಚಿನಲ್ಲಿರುವ ಮತ್ಸ್ಯಪ್ರಬೇಧಗಳ ಸಂತಾನೋತ್ಪತ್ತಿ ಮತ್ತು ಅಕ್ವೇರಿಯಂ ಸ್ಥಾಪನೆ ಶೀರ್ಷಿಕೆಯಡಿ 98 ಲಕ್ಷ ರೂ.ಅನುದಾನದಲ್ಲಿ ಅಕ್ವೇರಿಯಂನ್ನು ಸ್ಥಾಪಿಸಿ 22 ಜಾತಿಯ ಮೀನುಗಳನ್ನು ಸಾಕಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡುವುದರ ಜೊತೆಗೆ ನಾಶದ ಅಂಚಿನಲ್ಲಿರುವ ಕಿಜಾನ್, ಮಲಬಾರ್ ಡೈನೊ, ಚಂದ್ರಡಿಕೆ ಮುಂತಾದ ಮೀನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂತಾನೋತ್ಪತ್ತಿ ಮಾಡಿ ಅವುಗಳ ಮರಿಗಳನ್ನು ಪಶ್ಚಿಮ ಘಟ್ಟದ ಮೂಲ ಅವಾಸ ಸ್ಥಾನಕ್ಕೆ ಕೊಂಡೊಯ್ದು ಬಿಡುವುದು ಯೋಜನೆಯ ಮುಖ್ಯ ಉದ್ದೇಶ ಎಂದರು.
ಶಾಸಕ ಹರೀಶ ಪೂಂಜ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಪಂ ಸಿಇಒ ಡಾ.ಎಂ.ಆರ್.ರವಿ, ಜಿಪಂ ಸದಸ್ಯ ಪಿ. ಧರಣೇಂದ್ರ ಕುಮಾರ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಸುಶ್ಮಿತಾ, ನಾರಾವಿ ಗ್ರಾಪಂ ಉಪಾಧ್ಯಕ್ಷೆ ಯಶೋಧಾ, ಸದಸ್ಯ ಉದಯ ಹೆಗ್ಡೆ, ಕುತ್ಲೂರು ಅರಣ್ಯ ಸಮಿತಿ ಅಧ್ಯಕ್ಷ ಶ್ರೀಧರ ಪೂಜಾರಿ ಉಪಸ್ಥಿತರಿದ್ದರು. ವೇಣೂರು ವಲಯ ಅರಣ್ಯಾಧಿಕಾರಿ ಪ್ರಶಾಂತ ಪೈ ಕಾರ್ಯಕ್ರಮ ನಿರೂಪಿಸಿದರು.
ಪಿಲಿಕುಳ ನಿಸರ್ಗಧಾಮದ ಪ್ರಾಂಶುಪಾಲೆ ಸೈಂಟಿಸ್ಟ್ ಡಾ.ಸೂರ್ಯಪ್ರಕಾಶ್ ಶೆಣೈ, ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ ಮರಾಟಿ, ಪಿಲಿಕುಳ ಔಷಧಿ ವನದ ಮೇಲ್ವಿಚಾರಕ ಉದಯಕುಮಾರ್ ಶೆಟ್ಟಿ, ಅಕ್ವೇರಿಯಂ ಮೇಲ್ವಿಚಾರಕ ನಾಗೇಶ್ ಕುಲಾಲ, ಕ್ಷೇತ್ರ ಸಹಾಯಕ ರವಿ ಮತ್ತಿತರರು ಉಪಸ್ಥಿತರಿದ್ದರು.