ದೇಶದಲ್ಲಿ ಬಿಜೆಪಿ ಮುಖವಾಡ ಕಳಚಿದೆ: ವೆಂಕಪ್ಪ ಗೌಡ
ಮಂಗಳೂರು, ಜೂ.30: ದೇಶದಲ್ಲಿ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡು ನಾಲ್ಕೂವರೆ ವರ್ಷ ಕಳೆಯಿತು. ಮೋದಿ ಮೇಲೆ ಜನತೆ ಇಟ್ಟ ನಂಬಿಕೆಯನ್ನು ಬಿಜೆಪಿ ಉಳಿಸಿಕೊಳ್ಳಲಿಲ್ಲ. ಈ ಮೂಲಕ ದೇಶದಲ್ಲಿ ಬಿಜೆಪಿಯ ಮುಖವಾಡ ಕಳಚಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ವೆಂಕಪ್ಪ ಗೌಡ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಬಿಜೆಪಿಯು ಸ್ವೀಸ್ ಬ್ಯಾಂಕ್‌ನಲ್ಲಿನ ಕಪ್ಪುಹಣವನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ತಂದು ದೇಶದ ಎಲ್ಲ ಪ್ರಜೆಗಳ ಖಾತೆಗೆ 15 ಲಕ್ಷರೂ. ಹಾಕುವುದಾಗಿ ಭರವಸೆ ನೀಡಿತ್ತು. ಆದರೆ ಬಿಜೆಪಿಯು ಇಲ್ಲಿಯವರೆಗೆ ತನ್ನ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಹೇಳಿದರು.
ಸ್ವೀಸ್ ಬ್ಯಾಂಕ್‌ನಲ್ಲಿ ಜಮೆಯಾದ ಹಣದಲ್ಲಿ ಭಾರತೀಯರದ್ದೇ ಶೇ.50 ಕ್ಕೂ ಹೆಚ್ಚು ಹಣವಿದೆ. 2017ರಲ್ಲಿ ಏಳು ಸಾವಿರ ಕೋಟಿ ರೂ. ಹಣವನ್ನು ಸ್ವೀಸ್‌ನಲ್ಲಿ ಇಡಲಾಗಿದೆ. ದೇಶಕ್ಕೆ ಚೌಕಿದಾರ ಆಗುವುದಾಗಿ ದೊಡ್ಡ ಶಬ್ದಗಳಲ್ಲಿ ಹೇಳುವ ಮೋದಿ ಮಾತನಾಡುತ್ತಾರೆ. ಹಾಗಾದರೆ ಪ್ರಧಾನಿ ಮೋದಿಯ ಒಪ್ಪಿಗೆಯ ಮೇಲೆಯೇ ಸ್ವೀಸ್‌ಬ್ಯಾಂಕ್‌ಗೆ ಹಣ ಹಾಕಲಾಗಿದೆಯೇ ಎಂದು ಅವರು ಪ್ರಶ್ನಿಸಿದರು.
ದೇಶಕ್ಕೆ ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿದ್ದ ಬಿಜೆಪಿ, ಇಂದು ರಾಷ್ಟ್ರದಲ್ಲಿ ಕೆಟ್ಟ ದಿನಗಳನ್ನು ತಂದಿದೆ. ಬಿಜೆಪಿ ಕೇವಲ ಮಾತುಗಾರಿಕೆ, ಭಾಷಣಗಳಲ್ಲಿ ಮುಳುಗಿ ಹೋಗಿದೆ. ದೇಶದಲ್ಲಿ ಯಾವುದೇ ಅಭಿವೃದ್ಧಿಯನ್ನು ಕೆಲಸ ನಡೆಯುತ್ತಿಲ್ಲ. ಮೋದಿಯ 56 ಇಂಚಿನ ಎದೆಗಾರಿಕೆ ಈಗ ಎಲ್ಲಿ ಹೋಗಿದೆ ಎಂದು ವಾಗ್ದಾಳಿ ನಡೆಸಿದರು.
ಜಿಎಸ್‌ಟಿ ಜಾರಿಗೆ ತಂದ ವೇಳೆ ವಿರೋಧ ಪಕ್ಷಗಳಿಂದ ಟೀಕೆ, ಅಭಿಪ್ರಾಯ ಹಂಚಿಕೊಳ್ಳಲು ಪ್ರಧಾನಿ ಮೋದಿ ಯಾವುದೇ ಅವಕಾಶಗಳನ್ನು ನೀಡುತ್ತಿರಲಿಲ್ಲ. ದಿನಬಳಕೆಯ ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರಿದೆ. ಮೋದಿ ಅಧಿಕಾರಕ್ಕೆ ಬಂದ ಮೊದಲ ದಿನ 2014ರ ಮೇ 26ರ ಮೊದಲು ಒಂದು ಗ್ರಾಂ ಚಿನ್ನಕ್ಕೆ 2,320 ರೂ. ಇದ್ದದ್ದು ಇಂದಿನ ದಿನಗಳಲ್ಲಿ ಗ್ರಾಂಗೆ 2,800 ರೂ.ಗೆ ಏರಿಕೆಯನ್ನು ಕಂಡಿದೆ ಎಂದರು.
ಅಧಿಕಾರಕ್ಕೆ ಬಂದ ದಿನಗಳಲ್ಲಿ ಪೆಟ್ರೋಲ್, ಡೀಸೆಲ್‌ನ್ನು ಬಿಸ್ಲೇರಿ ಬಾಟಲ್‌ನಲ್ಲಿ ನೀರನ್ನು ತೆಗೆದುಕೊಂಡು ಹೋಗುವಂತಯೇ ದರದಲ್ಲಿ ಕಡಿತ ಮಾಡಲಾಗುವುದು ಎಂದು ಮೋದಿ ಭರವಸೆ ನೀಡಿದ್ದರು. ಆದರೆ ಸದ್ಯ ದೇಶದಲ್ಲಿ ಇಂಧನದ ಬೆಲೆ ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಆದರೆ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿವೆ ಎಂದು ಹೇಳಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ದೇಶದ ಜನತೆ ಸಂಪೂರ್ಣವಾಗಿ ತಿರಸ್ಕರಿಸಲಿದ್ದಾರೆ. ಮೋದಿಯ ಆಡಳಿತದಿಂದ ಪ್ರಜೆಗಳು ಬೇಸತ್ತು ಹೋಗಿದ್ದಾರೆ. ಯಾವುದೇ ಒಳ್ಳೆಯ ದಿನಗಳು ಬಂದಿಲ್ಲ. ಬದಲಾಗಿ ದೇಶದಲ್ಲಿ ದಿನಗಳು ಆವರಿಸಿವೆ. ನೋಟ್ ಬ್ಯಾನ್‌ನಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ 10 ವರ್ಷಗಳ ಹಿಂದೆ ಹೋಗಿದೆ. ಕಾರ್ಮಿಕರು ಕಟ್ಟಡ ಕಟ್ಟಲು ಮುಂದಾಗುತ್ತಿಲ್ಲ. ರಿಯಲ್ ಎಸ್ಟೇಟ್ ಹಿನ್ನಡೆಯನ್ನು ಅನುಭವಿಸಿದೆ ಎಂದರು.
ಪೇಜಾವರ ಶ್ರೀ ನರೇಂದ್ರ ಮೋದಿ ನೇತೃತ್ವದ ಆಡಳಿತ ನಿರೀಕ್ಷಿಸಿದ ಮಟ್ಟಿಗೆ ಅಭಿವೃದ್ಧಿಯನ್ನು ಕಂಡಿಲ್ಲ ಎಂದು ಸೂಕ್ಷ್ಮವಾಗಿ ಟೀಕಿಸಿದ್ದರು. ಅದನ್ನು ಬಿಜೆಪಿ ಗಣನೆಗೆ ತೆಗೆದುಕೊಳ್ಳಲಿಲ್ಲ. ಬದಲಾಗಿ ಶ್ರೀಗಳಿಗೇ ಮಾಹಿತಿಯ ಕೊರತೆ ಇದೆ ಎಂದು ಕನಿಷ್ಠ ಭಾಷೆಯಲ್ಲಿ ಅವಮಾನಿಸಿದ್ದಾರೆ. ದೇಶದಲ್ಲಿ ಬಿಜೆಪಿ ಸೋಲನ್ನಪ್ಪಿ, ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ಬರಲಿದೆ ಎಂದು ಭವಿಷ್ಯ ನುಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಪ್ರೇಮ್ ಬಳ್ಳಾಲ್‌ಬಾಗ್, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.