ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಹಕ್ಕುಗಳ ಉಲ್ಲಂಘನೆ : ಇಮಾಮ್ಸ್ ಕೌನ್ಸಿಲ್ ಖಂಡನೆ
ಮಂಗಳೂರು, ಜೂ. 30: ಸ್ಕಾರ್ಫ್ ಇಸ್ಲಾಮಿನಲ್ಲಿ ಸ್ತ್ರೀಯರಿಗೆ ಕಡ್ಡಾಯಗೊಳಿಸಿದಂತ ವಸ್ತ್ರಧಾರಣೆಯಾಗಿದ್ದು ಇದರ ಪಾಲನೆಗೆ ಅಷ್ಟು ಪ್ರಾಮುಖ್ಯತೆಯನ್ನು ನೀಡಿದೆ. ಆಗ್ನೇಸ್ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಧರಿಸುವುದನ್ನು ಬಲವಂತವಾಗಿ ತಡೆಯುತ್ತಿರುವ ಕ್ರಮವು ಮುಸ್ಲಿಂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತಿದ್ದು ಅಲ್ಲದೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಆಡಳಿತ ಮಂಡಳಿಯ ಈ ಕ್ರಮವನ್ನು ಇಮಾಮ್ಸ್ ಕೌನ್ಸಿಲ್ ದ.ಕ ಜಿಲ್ಲಾ ಸಮಿತಿಯು ಖಂಡಿಸುತ್ತದೆ.
ಅದೇ ಸಂಸ್ಥೆಯಲ್ಲಿ ಕಲಿಯುವ ಕ್ರೈಸ್ತ ವಿದ್ಯಾರ್ಥಿನಿಯರಿಗೆ ಧಾರ್ಮಿಕ ಸಮವಸ್ತ್ರಕ್ಕೆ ಅನುಮತಿಯಿದ್ದು ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ ಸೃಷ್ಟಿಸುತ್ತಿದೆ. ಸರ್ಕಾರ ಅನುದಾನಿತ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ನಡೆಸುವ ಸಂವಿಧಾನ ವಿರೋಧಿ ಕ್ರಮದ ವಿರುದ್ಧ ನಡೆಸುವ ಹೋರಾಟಕ್ಕೆ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರ ಮತ್ತು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶೀಘ್ರ ಸ್ಪಂದಿಸಿ ಪ್ರಕರಣಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕೆಂದು ದ.ಕ ಜಿಲ್ಲಾಧ್ಯಕ್ಷರಾದ ಮೌಲಾನಾ ರಫೀಕ್ ದಾರಿಮಿಯವರು ಆಗ್ರಹಿಸಿದ್ದಾರೆ.