ಜಿಎಸ್‌ಟಿಯ ಸಮರ್ಪಕ ಅನುಷ್ಠಾನ ದೇಶದ ಅಭಿವೃದ್ಧಿಗೆ ಪೂರಕ: ಎಆರ್‌ಪಿಎಲ್‌ಎಂ.ಡಿ. ವೆಂಕಟೇಶ್
ಮಂಗಳೂರು, ಜು.1: ಜಿಎಸ್‌ಟಿಯ ಸಮರ್ಪಕ ಅನುಷ್ಠಾನದಿಂದ ದೇಶದ ಆದಾಯ ಹೆಚ್ಚಳವಾಗುವುದರಿಂದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಎಂ.ವೆಂಕಟೇಶ್ ತಿಳಿಸಿದ್ದಾರೆ.
ಜಿಎಸ್‌ಟಿ ಅನುಷ್ಠಾನಗೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರದ ಅತ್ತಾವರದಲ್ಲಿ ಮಂಗಳೂರು ವಿಭಾಗದ ಜಿಎಸ್‌ಟಿ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡ ಜಿಎಸ್‌ಟಿ ವರ್ಷಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದ ತೆರಿಗೆ ಸುಧಾರಣೆಯ ನಿಟ್ಟಿನಲ್ಲಿ ಜಾರಿಗೆ ತಂದಿರುವ ಜಿಎಸ್‌ಟಿ ಮಹತ್ವದ ಕ್ರಮವಾಗಿದ್ದು, ಇದು ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ತೆರಿಗೆ ಪಾವತಿಯಲ್ಲಿ ತಳಮಟ್ಟದಿಂದ ಪಾರದರ್ಶಕ ವ್ಯವಸ್ಥೆ ತರುವ ನಿಟ್ಟಿನಲ್ಲಿ ಇದೊಂದು ದಿಟ್ಟ ಹೆಜ್ಜೆಯಾಗಿದೆ. ಸಮರ್ಪಕವಾದ ತೆರಿಗೆ ನೀತಿಯಿಂದ ದೇಶದ ಆದಾಯ ಹೆಚ್ಚಾಗುವುದರಿಂದ ಜನಪರ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಿಸಿದರು.
*ಜಿಎಸ್‌ಟಿ ಬಗ್ಗೆ ಕರಾವಳಿಯಲ್ಲಿ ಉತ್ತಮ ಪ್ರತಿಕ್ರಿಯೆ
ಮಂಗಳೂರು ಜಿಎಸ್‌ಟಿ ಆಯುಕ್ತ ಸುಬ್ರಹ್ಮಣ್ಯಂ ಮಾತನಾಡಿ, ಜಿಎಸ್‌ಟಿ ಅನುಷ್ಠಾನದ ಬಳಿಕ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಮಂಗಳೂರು ಜಿಎಸ್‌ಟಿ ಕಮಿಶನರೇಟ್ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.
ಪ್ರಥಮ ವರ್ಷದಲ್ಲಿ 11,295 ಮಂದಿ ಜಿಎಸ್‌ಟಿ ತೆರಿಗೆದಾರರು ತೆರಿಗೆ ಪಾವತಿಸಿದ್ದು, ಹಾಲಿ ವರ್ಷದಲ್ಲಿ 12,943 ಜಿಎಸ್‌ಟಿ ತೆರಿಗೆ ಪಾವತಿಸಲು ನೋಂದಾಯಿಸಿದ್ದಾರೆ. ಮಂಗಳೂರು ಜಿಎಸ್‌ಟಿ ಕಮಿಷನರೇಟ್ ವ್ಯಾಪ್ತಿಯಲ್ಲಿ 2017-18 ರಲ್ಲಿ 1952.10 ಕೋಟಿ ರೂ. 2018-19ರಲ್ಲಿ 561.94 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿದೆ.
ಮಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಗರಿಷ್ಠ ತೆರಿಗೆ ಪಾವತಿಸುವ ಎಂಆರ್‌ಪಿಎಲ್‌ನ ತೆರಿಗೆ ಪಾವತಿಯಲ್ಲಿ ಏರಿಳಿತವಾಗಿರುವುದು ಒಟ್ಟು ಪಾವತಿಯಲ್ಲಿ ಇಳಿಕೆಗೆ ಕಾರಣವಾಗಿದೆ. ಆದರೂ ಪಾವತಿದಾರರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಜಿಎಸ್‌ಟಿಯಲ್ಲಿ ತೆರಿಗೆಯ ಮೂಲಕ ಹಣ ಪಾವತಿ ಮಾಡಿದ್ದರೂ ಕೆಲವು ವಿನಾಯತಿ ಪಡೆಯಲು ಅವಕಾಶ ಇರುವುದರಿಂದ ಪಾವತಿ ಮಾಡಿದ ಬಳಿಕ ತೆರಿಗೆದಾರರಿಗೆ ಹೆಚ್ಚಿನ ಮೊತ್ತವನ್ನು ಮರುಪಾವತಿ ಮಾಡುವ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತದೆ ಎಂದು ಸುಬ್ರಹ್ಮಣ್ಯ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸೇರಿದಂತೆ ಒಕ್ಕೂಟ ವ್ಯವಸ್ಥೆಯಲ್ಲಿ ಸುಮಾರು 17 ರೀತಿಯ ತೆರಿಗೆಗಳನ್ನು ಒಟ್ಟು ಸೇರಿಸಿ ಅನುಷ್ಠಾನಗೊಳಿಸಲಾಗುತ್ತಿರುವ ಜಿಎಸ್‌ಟಿ ತೆರಿಗೆ ಸುಧಾರಣೆಯ ಮಹತ್ವದ ಹೆಜ್ಜೆಯಾಗಿದೆ. ದೇಶದಲ್ಲಿ ಜಿಎಸ್‌ಟಿ ಅನುಷ್ಠಾನಗೊಂಡು ಒಂದು ವರ್ಷ ಆಗಿರುವ ಸಂದರ್ಭದಲ್ಲಿ ಕೆಲವೊಂದು ತಾಂತ್ರಿಕ ವಿಚಾರಗಳಲ್ಲಿ ಸುಧಾರಣೆಯಾಗಬೇಕೆಂದು ಬಂದಿರುವ ಸಲಹೆಗಳನ್ನು ಹೊರತು ಪಡಿಸಿದರೆ ಬಹುತೇಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸುಬ್ರಹ್ಮಣ್ಯ ವಿವರಿಸಿದರು.
ಈ ಬಗ್ಗೆ ಮಂಗಳೂರು ವಿಭಾಗದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜನರು ಸಕಾರಾತ್ಮಕವಾದ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಜಿಎಸ್‌ಟಿ ದಿನಾಚರಣೆಯ ಅಂಗವಾಗಿ ಮಂಗಳೂರು ಕೇಂದ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ವಿಭಾಗದ ಅಧಿಕಾರಿಗಳನ್ನು ಅಭಿನಂದಿಸಲಾಯಿತು.
ಹೆಚ್ಚುವರಿ ಆಯುಕ್ತ ಇಮಾಮುದ್ದೀನ್ ಅಹ್ಮದ್ ಸ್ವಾಗತಿಸಿದರು. ಸಹಾಯಕ ಆಯುಕ್ತ ಶ್ರೇಯಸ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಕಮಿಷನರ್ ರಾಮಕೃಷ್ಣಯ್ಯ ವಂದಿಸಿದರು.