×
Ad

ಗ್ರಾಹಕರಿಗೆ ವಂಚನೆ ಆರೋಪ: ಚೆನ್ನೈ ಮೂಲದ ತಿರುಪುರ ಚಿಟ್ಸ್ ಪ್ರೈ.ಲಿ. ವಿರುದ್ಧ ದೂರು

Update: 2018-07-01 18:43 IST

ಮಂಗಳೂರು, ಜು. 1: ಚೆನ್ನೈ ಮೂಲದ ‘ತಿರುಪುರ ಚಿಟ್ಸ್ ಪ್ರೈ.ಲಿ.’ ಎಂಬ ಹೆಸರಿನ ಕಂಪೆನಿಯು ದ.ಕ. ಜಿಲ್ಲೆಯ ಸುಮಾರು 200ಕ್ಕೂ ಅಧಿಕ ಗ್ರಾಹಕರಿಂದ ಸಂಗ್ರಹಿಸಿದ 9 ಕೋ.ರೂ. ಅಧಿಕ ಹಣವನ್ನು ವಂಚಿಸಿದೆ ಎನ್ನಲಾದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ಇಕೊನಾಮಿಕ್ ಆ್ಯಂಡ್ ನಾರ್ಕೊಟಿಸ್ ಕ್ರೈಂ ಠಾಣೆಗೆ ಮಂಗಳೂರಿನ ಅರಾಫತ್ ಎಂಬವರು ದೂರು ನೀಡಿದ್ದಾರೆ. ತನ್ಮಧ್ಯೆ ನೊಂದ ಹಲವು ಗ್ರಾಹಕರು ರವಿವಾರ ನಗರದಲ್ಲಿ ಸಭೆ ಸೇರಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಕಂಪನಿಯು ನಗರ ಸಹಿತ ಜಿಲ್ಲೆಯ ಹಲವು ಗ್ರಾಹಕರಿಂದ ಕೋಟ್ಯಂತರ ಹಣ ಸಂಗ್ರಹಿಸಿದೆ ಎನ್ನಲಾಗಿದೆ. ಆರಂಭದಲ್ಲಿ ಗ್ರಾಹಕರಿಗೆ ನಿಗದಿತ ಸಮಯಕ್ಕೆ ಹಣ ಮರಳಿಸಿದ ಸಂಸ್ಥೆಯು ಬಳಿಕ ಹೆಚ್ಚುವರಿ ಮೊತ್ತದ ಫಂಡ್‌ಗೆ ಸೇರ್ಪಡೆಗೊಳಿಸಿ ನಿಯಮಿತವಾಗಿ ಹಣ ಸಂಗ್ರಹಿಸಿ ಇದ್ದಕ್ಕಿದ್ದಂತೆಯೇ ಮಾಯವಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯ ಕಟ್ಟಡವೊಂದರಲ್ಲಿದ್ದ ಈ ಕಂಪನಿಯ ಮಂಗಳೂರು ಬ್ರಾಂಚ್ ಕಚೇರಿಗೂ ಈಗ ಬೀಗ ಜಡಿಯಲಾಗಿದೆ. ಹಾಗಾಗಿ ಹಣವನ್ನು ಕಳಕೊಂಡ ಗ್ರಾಹಕರು ಕಂಗಾಲಾಗಿದ್ದಾರೆ. ಚಿಟ್ಸ್ ಫಂಡ್ ಹೆಸರಿನಲ್ಲಿ ಹಲವು ಬಗೆಯ ಆಮಿಷಗಳನ್ನು ಒಡ್ಡಿ ಕೋಟ್ಯಂತರ ರೂ. ಸಂಗ್ರಹಿಸಿ ಹಲವು ಕಂಪನಿಗಳು ಈಗಾಗಲೆ ನಗರದ ಹಲವಾರು ಮಂದಿಗೆ ವಂಚಿಸಿದ ಘಟನೆ ಈ ಹಿಂದೆ ಬೆಳಕಿಗೆ ಬಂದಿದ್ದರೂ ಕೂಡ ಬುದ್ಧಿವಂತರ ಜಿಲ್ಲೆಯಲ್ಲಿ ಮತ್ತೆ ಮತ್ತೆ ಇಂತಹ ಮೋಸದ ಜಾಲಗಳು ಸಕ್ರಿಯವಾಗಿರುವುದು ಪೊಲೀಸ್ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ.

ಕರ್ನಾಟಕದಲ್ಲಿ ಸುಮಾರು 34 ಸಹಿತ ದೇಶಾದ್ಯಂತ 150ಕ್ಕೂ ಅಧಿಕ ಶಾಖೆಗಳನ್ನು ಈ ಕಂಪನಿ ಹೊಂದಿದೆ. ಮಂಗಳೂರಿನಲ್ಲೇ ಸುಮಾರು 200 ಗ್ರಾಹಕರಿಗೆ 9 ಕೋ.ರೂ. ಅಧಿಕ ಹಣ ವಂಚಿಸಿರುವ ಈ ಕಂಪನಿ ದೇಶಾದ್ಯಂತ ಗ್ರಾಹಕರಿಂದ ಸಂಗ್ರಹಿಸಿರುವ ಹಣದ ಮೊತ್ತ 20 ಪಟ್ಟು ಜಾಸ್ತಿಯಾಗಬಹುದು ಎಂದು ಹೇಳಲಾಗುತ್ತಿದೆ.

ಮಂಗಳೂರಿನ ಅರಾಫತ್ ಎಂಬವರು ನಗರದ ಇಕೊನಾಮಿಕ್ ಆ್ಯಂಡ್ ನಾರ್ಕೊಟಿಸ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಿ.ವಿ. ಕೃಷ್ಣಪ್ರಸಾದ್, ನಿರ್ದೇಶಕರಾದ ಸುಮನಾ, ವಾಸು ಕೆ., ನಾರಾಯಣ ಪೊಟ್ಟಿ ಬಾಲಕೃಷ್ಣ, ಜಯಪ್ರಕಾಶ್ ಬಸವರಾಜ ಉಪ್ಪಿನ್, ಕುರುಂಬಯ್ಯ ಮಂಡೇಪಂಡ ಗಣಪತಿ, ಎಂ.ಇ.ವೇಣು ಮತ್ತು ಉದ್ಯೋಗಿಗಳಾದ ರಾಯ್ಡೋ ಡಿಸಿಲ್ವಾ, ಶಾಜಿ ವಿ., ದೇವರಾಜ್ ಎಂ.ಎಸ್., ಜಯರಾಮ್ ಎಂ., ಸೂರಜ್ ಕೆ. ಅವರನ್ನು ಆರೋಪಿಗಳು ಎಂದು ಗುರುತಿಸಿದ್ದಾರೆ.

ತಾನು 50 ಲಕ್ಷ ರೂ. ಮೌಲ್ಯದ ಚಿಟ್ಸ್ ಫಂಡ್‌ಗೆ ಸೇರ್ಪಡೆಗೊಂಡು ಸುಮಾರು 20 ತಿಂಗಳ ಕಾಲ 32,38,450 ರೂ. ಪಾವತಿಸಿದ್ದು, ಅದರ ಡಿವಿಡೆಂಡ್ ಸೇರಿ ಅಂದಾಜು 40 ಲಕ್ಷ ರೂ. ಮರಳಿ ಸಿಗಬೇಕಿತ್ತು. ಆದರೆ, ಹಣ ಮರಳಿಸುವ ಲಕ್ಷಣ ಕಾಣದಿದ್ದಾಗ ದೂರು ನೀಡುವುದು ಅನಿವಾರ್ಯವಾಯಿತು ಎಂದು ಅರಾಫತ್ ತಿಳಿಸಿದ್ದಾರೆ.

ಮೊದಲು ನಾವು ಗೋಕುಲಂ ಚಿಟ್ಸ್ ಫಂಡ್‌ನಲ್ಲಿ ಹಣ ತೊಡಗಿಸುತ್ತಿದ್ದೆವು. ಬಳಿಕ ‘ತಿರುಪುರ’ದಲ್ಲಿ ನನ್ನ ಹೂಡಿಕೆ ಆರಂಭಿಸಿದೆವು. ಮೊದಲು 5 ಲಕ್ಷದ ಫಂಡ್‌ಗೆ ಸೇರಿದ್ದೆವು. 2 ವರ್ಷದೊಳಗೆ ಆ ಹಣ ಡಿವಿಡೆಂಡ್ ಸಹಿತ ಸಿಕ್ಕಿತು. ಅದೇ ವಿಶ್ವಾಸದಿಂದ ನಾವು 50 ಲಕ್ಷ ರೂ.ನ ಚಿಟ್ ಫಂಡ್‌ಗೆ ಹಣ ತೊಡಗಿಸತೊಡಗಿದೆವು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಈ ಕಂಪೆನಿಯು ಮುಳುಗುತ್ತಿರುವ ಬಗ್ಗೆ ಸಂಶಯ ಕಾಡತೊಡಗಿತು. ಅದರಂತೆ ಹಣ ಹೂಡಿಕೆ ಮಾಡುವುದನ್ನು ಸ್ಥಗಿತಗೊಳಿಸಿ ನೇರ ಚೆನ್ನೈಗೆ ಧಾವಿಸಿದೆವು. ಆವಾಗ ಚೆನ್ನೈಯ ಕೇಂದ್ರ ಕಚೇರಿಗೂ ಬೀಗ ಜಡಿಯಲಾಗಿತ್ತು ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕಿ (ಗಂಡ-ಹೆಂಡತಿ)ಯಲ್ಲದೆ ಇತರ 7 ಮಂದಿ ನಿರ್ದೇಶಕರ ಮೇಲೆ ಪ್ರಕರಣ ದಾಖಲಾಗಿರುವುದು ಹಾಗೂ ದಂಪತಿಯನ್ನು ಪೊಲೀಸರು ಬಂಧಿಸಿರುವುದು ತಿಳಿದು ಬಂತು ಎಂದು ಅರಾಫತ್ ಹೇಳಿದ್ದಾರೆ.

ದೇಶಾದ್ಯಂತ ಲಕ್ಷಾಂತರ ಮಂದಿಗೆ ವಂಚಿಸಿದ ಈ ಕಂಪೆನಿಯ ನಿರ್ದೇಶಕಿಯಾಗಿರುವ ಸುಮನಾ ಮಂಗಳೂರು ಮೂಲದವರು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬೃಹತ್ ಮೊತ್ತದ ವಂಚನಾ ಜಾಲವೊಂದು ಬೆಳಕಿಗೆ ಬಂದಿದ್ದು, ನೊಂದ ಇತರ ಗ್ರಾಹಕರು ಕೂಡಾ ಪೊಲೀಸರಿಗೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News