ಉಡುಪಿ: ಏಕಕಾಲದಲ್ಲಿ 90 ವೀಣೆಗಳ ಸಮೂಹ ವಾದನ
ಉಡುಪಿ, ಜು.1: ವೀಣೆ ಭಾರತದ ಪ್ರಾಚೀನ ವಾದ್ಯ. ಇದರ ಉಲ್ಲೇಖ ಉಪನಿಷತ್ತಿನಲ್ಲೂ ಬರುತ್ತದೆ. ನಾವು ನಿರ್ಮಿಸಿ ನುಡಿಸುವ ವೀಣೆಯು ಒಂದು ರೀತಿಯಾದರೆ, ಈ ಮಾನವ ಶರೀರ ದೇವರು ಕೊಟ್ಟಿರುವ ವೀಣೆ ಇನ್ನೊಂದು ರೀತಿಯಾಗಿದೆ. ವೀಣೆಯನ್ನು ತಂತಿ ಇರುವ ತನಕ ಮಾತ್ರ ನುಡಿಸಲು ಸಾಧ್ಯ, ಅದೇ ರೀತಿ ಮಾನವನಿಗೂ ಉಸಿರು ಎನ್ನುವ ತಂತಿ ಇರುವ ತನಕ ಇರಲು ಸಾಧ್ಯ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಬೆಳಗ್ಗೆ ಎದ್ದು ದರ್ಶನ ಮಾಡಬೇಕಾದ ಮಂಗಲ ದ್ರವ್ಯಗಳಲ್ಲಿ ವೀಣೆಯು ಒಂದಾಗಿದ್ದು, ಇದು ಮಂಗಲ ವಾದ್ಯವಾಗಿದೆ. ಪಾಶ್ಚಾತ್ಯ ವಾದ್ಯಗಳ ಹಿಂದೆ ಸಾಗುವವರು ಹೆಚ್ಚಿರುವ ಇಂದಿನ ಕಾಲಘಟ್ಟದಲ್ಲಿ ಭಾರತದ ಪ್ರಾಚೀನ ಸಂಗೀತ ಉಪಕರಣವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ರಾಜಾಂಗಣ ದಲ್ಲೀಗ ವೀಣೆಯ ವಿಶ್ವರೂಪವೇ ಪ್ರದರ್ಶನಗೊಳು್ಳತ್ತಿದೆ ಎಂದು ಸ್ವಾಮೀಜಿ ನುಡಿದರು.
ಮಣಿಪಾಲದ ದೇವಕಿ ಕೆ. ಭಟ್ ಅಧ್ಯಕ್ಷತೆ ವಹಿಸಿದ್ದರು. ವಿದುಷಿ ಯೋಗ ವಂದನಾ ಬೆಂಗಳೂರು, ಡಾ.ಅನಸೂಯಾ ದೇವಿ ಮಂಗಳೂರು ಇವರು ಅತಿಥಿಗಳಾಗಿ ಭಾಗವಹಿಸಿದ್ದರು. ಟ್ರಸ್ಟ್‌ನ ಟ್ರಸ್ಟಿಗಳಾದ ಪವನ, ಡಾ.ಬಾಲಚಂದ್ರ ಆಚಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 9 ಮಂದಿ ವೀಣಾ ಗುರುಗಳಿಗೆ ಸ್ವಾಮೀಜಿ ಟ್ರಸ್ಟಿನ ವತಿಯಿಂದ ಸನ್ಮಾನಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿದರು.
ಶಿಲ್ಪಿ ಜೋಶಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪವನ ವಂದಿಸಿದರು. ಬಳಿಕ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ 90 ಮಂದಿ ವೀಣಾವಾದಕರಿಂದ ಏಕ ಕಾಲದಲ್ಲಿ ‘ವೀಣಾ ವೃಂದ’ ವೀಣಾ ವಾದನ ಕಚೇರಿ ನಡೆಯಿತು. ಸಂಜೆ ಮಣಿಪಾಲದ ವಿದುಷಿ ಅರುಣಾ ಕುಮಾರಿ ಇವರ ವೀಣಾ ವಾದನ, ವಿಪಂಚಿ ಬಳಗ ಮಣಿಪಾಲ ಇವರ ಪಂಚವೀಣಾ ವಾದನ ಹಾಗೂ ಕಲಾಸ್ಪಂದನ ವಿದ್ಯಾರ್ಥಿಗಳಿಂದ ‘ರಾಘವೇಂದ್ರ ಮಹಿಮೆ’ ವೀಣಾ ನಾಟಕ ಪ್ರದರ್ಶನಗೊಂಡಿತು.