ಉಡುಪಿ: ಗದ್ದೆಗಿಳಿದು ನೇಜಿ ನೆಟ್ಟ ಸ್ಕೌಟ್, ಗೈಡ್ ವಿದ್ಯಾರ್ಥಿಗಳು
ಉಡುಪಿ, ಜು.1: ಜಿಲ್ಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಬೇಸಾಯದ ವಿವಿಧ ಮಜಲುಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲು ಕೃಷಿ ಹಾಗೂ ವ್ಯವಸಾಯಕ್ಕೆ ಸಂಬಂಧಿಸಿದ ವಿಶಿಷ್ಟ ಶಿಬಿರವೊಂದನ್ನು ಭಾರತ್ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆ ಇತ್ತೀಚೆಗೆ ಕಾರ್ಕಳದಲ್ಲಿ ಹಮ್ಮಿಕೊಂಡಿತ್ತು.
ಬ್ರಹ್ಮಾವರ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ವಿದ್ಯಾರ್ಥಿ ಗಳಿಗೆ ಬೇಸಾಯದ ವಿವಿಧ ಮಜಲುಗಳ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೇ ಕೃಷಿ ಇಲಾಖೆಯಿಂದ ಕೃಷಿ, ಕಷಿ ಕಟ್ಟುವ, ತೋಟಗಾರಿಕೆಯ ಬಗ್ಗೆ, ಕೆಸರು ಗದ್ದೆ ಆಟಗಳು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿತೆ ಹಮ್ಮಿಕೊಳ್ಳಲಾಗಿತ್ತು.
ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿ ಗಳೊಂದಿಗೆ ಜೊತೆ ಶಿಕ್ಷಕರು ಸಹ ಭಾಗವಹಿಸಿದ್ದರು. ಕಾರ್ಕಳದ ಕವಿತ ರೈಸ್ ಮಿಲ್ ಪರಿಸರದಲ್ಲಿ ನಡೆದ ಎರಡು ದಿನಗಳ ಈ ಪ್ರಾತ್ಯಕ್ಷಿಕೆಯಲ್ಲಿ ವಿದ್ಯಾರ್ಥಿ ಗಳು ಉತ್ಸಾಹದಿಂದ ಭಾಗವಹಿಸಿ ಕೃಷಿ ಬದುಕಿನ ಕಷ್ಟ-ಸುಖಗಳನ್ನು ಅರಿತರಲ್ಲದೇ, ಕೆಸರು ಗದ್ದೆಗಿಳಿದು ಖುಷಿ ಖುಷಿಯಾಗಿ ನೇಜಿಯನ್ನು ನೆಟ್ಟರು.