ಕುಳಾಯಿ ಜೆಟ್ಟಿ ನಿರ್ಮಾಣಕ್ಕೆ 196.51 ಕೋ.ರೂ. ಬಿಡುಗಡೆ: ಸಂಸದ ನಳಿನ್
ಮಂಗಳೂರು, ಜು.1: ದೇಶದಲ್ಲಿ ಎರಡನೇ ಸರ್ವಋತು ಮೀನುಗಾರಿಕಾ ಬಂದರು ಕುಳಾಯಿಯಲ್ಲಿ ನಿರ್ಮಾಣವಾಗಲಿದ್ದು, ಇದಕ್ಕೆ ಕೇಂದ್ರ ಸರಕಾರ 196.51 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ರವಿವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ಜೆಟ್ಟಿಯಲ್ಲಿ 325 ಬೋಟ್‌ಗಳು ಮತ್ತು 300 ನಾಡದೋಣಿಗಳು ನಿಲ್ಲಲು ಅವಕಾಶ ಸಿಗಲಿದೆ. ಅಲ್ಲದೆ ಎರಡು ಕಡೆ ಬ್ರೇಕ್ ವಾಟರ್ ನಿರ್ಮಾಣಗೊಳ್ಳಲಿದೆ. ಮೀನು ಮಾರಾಟಕ್ಕೆ ಎರಡು ಪ್ರಾಂಗಣ, ಬಲೆ ದುರಸ್ತಿ, ದೋಣಿ ದುರಸ್ತಿಗೆ ಶೆಡ್, ಮೀನುಗಾರರಿಗೆ ವಿಶ್ರಾಂತಿಗೃಹ ನಿರ್ಮಾಣಗೊಳ್ಳಲಿದೆ ಎಂದರು.
ಕುಳಾಯಿ ಜೆಟ್ಟಿ ನಿರ್ಮಾಣಕ್ಕೆ ಕೇಂದ್ರ ಹಡಗು ಸಚಿವಾಲಯದ ಸಾಗರ್‌ಮಾಲಾ ಯೋಜನೆಯಲ್ಲಿ ಶೇ.50ರಷ್ಟು (98.25 ಕೋ.ರೂ.), ಕೇಂದ್ರ ಕೃಷಿ ಸಚಿವಾಲಯದ ಮೀನುಗಾರಿಕಾ ವಿಭಾಗ ಮತ್ತು ಎನ್‌ಎಂಪಿಟಿಯಿಂದ ಶೇ.45ರಷ್ಟು (88.43 ಕೋ.ರೂ.), ರಾಜ್ಯ ಸರಕಾರದಿಂದ ಶೇ. 5ರಷ್ಟು (9.83 ಕೋ.ರೂ.) ಅನುದಾನ ಸೇರಿದೆ. ಕುಳಾಯಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಈ ಹಿಂದೆ 30 ಎಕರೆ ಭೂಮಿ ಕಾದಿರಿಸಲಾಗಿತ್ತು. ಆ ಪೈಕಿ ಜನವಸತಿಯಿಲ್ಲದ ಹೊಸಬೆಟ್ಟು ಮತ್ತು ಕುಳಾಯಿ ಗ್ರಾಮದ 10 ಎಕರೆ ಭೂಮಿಯಲ್ಲಿ ಜೆಟ್ಟಿ ನಿರ್ಮಾಣಗೊಳ್ಳಲಿದೆ. ರಾಜ್ಯ ಸರಕಾರ ಭೂಮಿ ಹಸ್ತಾಂತರ ಮಾಡಿದೊಡನೆ ಎನ್‌ಎಂಪಿಟಿ ಟೆಂಡರ್ ಪ್ರಕ್ರಿಯೆ ನಡೆಸಲಿದೆ ಎಂದು ನಳಿನ್ ಹೇಳಿದರು.
ನವಯುಗ್ ಅಧಿಕಾರಿಗಳು ಮಂಗಳೂರಿಗೆ: ಪಂಪ್‌ವೆಲ್ ಮೇಲ್ಸೆತುವೆ ಗುತ್ತಿಗೆ ವಹಿಸಿಕೊಂಡ ನವಯುಗ ಕಂಪೆನಿಯ ಹಿರಿಯ ಅಧಿಕಾರಿಗಳು ಸೋಮವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ಅವರೊಂದಿಗೆ ಸಭೆ ನಡೆಸಿ ಮೇಲ್ಸೆತುವೆ ಪೂರ್ಣಗೊಳಿಸುವ ಬಗ್ಗೆ ಮಾಹಿತಿ ಪಡೆಯಲಾಗುವುದು. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ತಿಗೊಳಿಸಲು ವಿಫಲವಾದರೆ ಟೋಲ್‌ಗೇಟ್ ಬಂದ್ ಮಾಡಲಾಗುವುದು ಎಂದು ನಳಿನ್ ಎಚ್ಚರಿಸಿದರು.
ಹೆದ್ದಾರಿ 45 ಮೀ. ಅಗಲ: ಮಂಗಳೂರು-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಕುಲಶೇಖರ-ಕಾರ್ಕಳ ಹೆದ್ದಾರಿ ನಿರ್ಮಾಣಕ್ಕೆ ಜು.31ರೊಳಗೆ ‘ಎ’ ನೋಟಿಫಿಕೇಶನ್, ಸೆ.3ರೊಳಗೆ ‘ಡಿ’ ನೋಟಿಫಿಕೇಶನ್ ಹೊರಡಿಸಿ ಡಿಸೆಂಬರ್ ಮೊದಲ ವಾರದಲ್ಲಿ ಟೆಂಡರ್ ಕರೆಯಲಾಗುವುದು. ಮೂಡುಬಿದಿರೆ ಮತ್ತು ಗುರುಪುರದಲ್ಲಿ ಬೈಪಾಸ್ ನಿರ್ಮಾಣಗೊಳ್ಳಲಿದೆ. ಈ ಹಿಂದಿನ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಒತ್ತಡದಿಂದ ಹೆದ್ದಾರಿ ಅಗಲವನ್ನು 30 ಮೀಟರ್‌ಗೆ ನಿಗದಿಗೊಳಿಸಿ ಸಲ್ಲಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಹೆದ್ದಾರಿ ನಿಯಮದಂತೆ 45 ಮೀ. ಅಗಲದ ರಸ್ತೆ ನಿರ್ಮಾಣಗೊಳ್ಳಲಿದೆ. ಗುರುಪುರದಲ್ಲಿ ಈಗಿನ ಸೇತುವೆ ಬಳಿ ಇನ್ನೊಂದು ಸೇತುವೆ ನಿರ್ಮಾಣಗೊಳ್ಳಲಿದೆ. ಜತೆಗೆ ಹೊಸ ಹೆದ್ದಾರಿಯಲ್ಲಿ ಪ್ರತ್ಯೇಕ ಸೇತುವೆ ರಚಿಸಲಾಗುವುದು. ಅಡ್ಡೂರು ನೂಯಿ ಬಳಿ ಮೇಲ್ಸೆತುವೆ ನಿರ್ಮಾಣಗೊಳ್ಳಲಿದೆ ಎಂದು ನಳಿನ್ ಹೇಳಿದರು.
97 ಗ್ರಾಪಂ ಆಯ್ಕೆ: ಕೇಂದ್ರ ಸರಕಾರದ ಮಿಷನ್ ಅಂತ್ಯೋದಯ ಯೋಜನೆಯಡಿ ಜಿಲ್ಲೆಯ 97 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ. ಈ ಎಲ್ಲ ಗ್ರಾಪಂಗಳಿಗೆ ಮೂಲಸೌಲಭ್ಯ ಒದಗಿಸುವುದು ಯೋಜನೆ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಬ್ಯಾಂಕ್, ಅಂಚೆ ಸೌಲಭ್ಯ, ಎಟಿಎಂ, ಶಿಕ್ಷಣ ಸಂಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಮೊಬೈಲ್ ಟವರ್, ಕಂಪ್ಯೂಟರ್ ಸೌಲಭ್ಯವನ್ನು ಆಯಾ ಇಲಾಖೆಗಳು ಸಂಸದರ ಆದರ್ಶ ಗ್ರಾಮದ ಮಾದರಿಯಲ್ಲಿ ಅನುದಾನ ಹೊಂದಿಸಿಕೊಂಡು ನೀಡಬೇಕಿದೆ. ಸೆಪ್ಟೆಂಬರ್ ಬಳಿಕ ಯೋಜನೆ ಕಾರ್ಯಾರಂಭಿಸಲಿದೆ. 2 ವರ್ಷದೊಳಗೆ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ಕೇಂದ್ರ ಸರಕಾರ ಹಾಕಿಕೊಂಡಿದೆ ಎಂದು ನಳಿನ್ ತಿಳಿಸಿದರು.
ಎನ್‌ಐಟಿಕೆಯಲ್ಲಿ ಕೇಂದ್ರೀಯ ವಿದ್ಯಾಲಯ: ಮಂಗಳೂರಿನ ಎಕ್ಕೂರು ಮತ್ತು ಪಣಂಬೂರಿನಲ್ಲಿ 2 ಕೇಂದ್ರೀಯ ವಿದ್ಯಾಲಯಗಳಿದೆ. 2019-20ನೇ ಸಾಲಿನಲ್ಲಿ ಸುರತ್ಕಲ್ ಎನ್‌ಐಟಿಕೆಯಲ್ಲಿ ಹೊಸದಾಗಿ ಕೇಂದ್ರೀಯ ವಿದ್ಯಾಲಯ ಆರಂಭಗೊಳ್ಳಲಿದೆ. ಜಿಲ್ಲೆಗೆ ಹೆಚ್ಚುವರಿ ಕೇಂದ್ರೀಯ ವಿದ್ಯಾಲಯ
ಮಂಜೂರುಗೊಳಿಸಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್‌ರಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಮನವಿ ಸ್ಪಂದಿಸಿದ ಕೇಂದ್ರ ಸರಕಾರ ಎನ್‌ಐಟಿಕೆ ಆವರಣದೊಳಗೆ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಒಪ್ಪಿಗೆ ನೀಡಿದೆ. ಇದಕ್ಕಾಗಿ ಎನ್‌ಐಟಿಕೆ ಒಳಗೆ 5 ಎಕರೆ ಭೂಮಿ ಗುರುತಿಸಲಾಗಿದೆ. ಮುಲ್ಕಿ, ಮೂಡುಬಿದಿರೆ, ಬೆಳ್ತಂಗಡಿಯ ವಿದ್ಯಾರ್ಥಿಗಳಿಗೆ ಹೊಸ ಕೇಂದ್ರೀಯ ವಿದ್ಯಾಲಯ ಅನುಕೂಲವಾಗಲಿದೆ ಎಂದು ನಳಿನ್ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿ, ಮಾಜಿ ಮೇಯರ್ ಗಣೇಶ ಹೊಸಬೆಟ್ಟು, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಮಹೇಶ್ ಕುಮಾರ್ ಉಪಸ್ಥಿತರಿದ್ದರು.