×
Ad

‘ಸಾಕ್ಷಿದಾರರ ದಿನಾಚರಣೆ’ ಶೀಘ್ರ ಜಾರಿ: ಎಸ್ಪಿ ರವಿಕಾಂತೇಗೌಡ

Update: 2018-07-01 20:07 IST

ಮಂಗಳೂರು, ಜು.1: ಅನೇಕ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷಾಧಾರ ಸಲ್ಲಿಸುವ ಸಂದರ್ಭದಲ್ಲಿ ಸಾಕ್ಷಿಗಳು ಹಿಂದೆ ಸರಿಯುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಸಾಕ್ಷಿದಾರರ ಮೇಲೆ ಒತ್ತಡ ಹೇರುವುದನ್ನು ತಡೆಯಲು ‘ಸಾಕ್ಷಿದಾರರ ದಿನಾಚರಣೆ’ಯನ್ನು ಜಾರಿಗೆ ತರಲು ಇಲಾಖೆ ಮುಂದಾಗುತ್ತಿದೆ ಎಂದು ದ.ಕ. ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ತಿಳಿಸಿದ್ದಾರೆ.

ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ರವಿವಾರ ನಡೆದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಸರಕಾರದ ಮಟ್ಟದಲ್ಲಿ ನೂತನ ಯೋಜನೆ ‘ಸಾಕ್ಷಿದಾರರ ದಿನಾಚರಣೆ’ ಜಾರಿಗೆ ಚಿಂತಿಸಲಾಗಿದೆ. ಪ್ರತೀ 3ನೇ ಶನಿವಾರದಂದು ದಲಿತ ಸಂಘಟನೆಗಳು, ಮುಖಂಡರ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಸಾಕ್ಷಿದಾರರಿಗೆ ತಿಳುವಳಿಕೆ, ಸಲಹೆ, ಮಾರ್ಗದರ್ಶನ ನೀಡಲಾಗುವುದು. ಅಗತ್ಯವಿದ್ದಲ್ಲಿ ಸಾಕ್ಷಿಗಳಿಗೆ ಪೊಲೀಸ್ ರಕ್ಷಣೆ ನೀಡಲಾಗುವುದು ಎಂದರು.

ಇತ್ತೀಚೆಗೆ ಆರೇಳು ಪ್ರಕರಣಗಳಲ್ಲಿ ಸಾಕ್ಷಿದಾರರ ಮೇಲೆ ಒತ್ತಡ ಹೇರಿದಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಅಂತಹ ಸಂತ್ರಸ್ತರು ಒತ್ತಡ ಹೇರುವವರ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಬೇಕು. ಬಳಿಕ ಅಗತ್ಯವಿದ್ದ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯಿಂದ ರಕ್ಷಣೆಯನ್ನು ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ರವಿಕಾಂತೇಗೌಡ ತಿಳಿಸಿದರು.

 ಕಳೆದ ಎರಡು ತಿಂಗಳಲ್ಲಿ ದಲಿತರಿಗೆ ಸಂಬಂಧಪಟ್ಟ 17 ಪ್ರಕರಣಗಳನ್ನು ತನಿಖೆ ಮಾಡಲಾಗಿದೆ. ಪ್ರಕರಣಗಳಿಗೆ ಸಂಬಂಧಪಟ್ಟ ದಾಖಲೆ, ಸಾಕ್ಷಿ ಸಂಗ್ರಹ ಮಾಡಲಾಗಿದೆ. ದೌರ್ಜನ್ಯ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.
‘2017ರಲ್ಲಿ ಬಂಟ್ವಾಳ ತಾಲೂಕಿನ ಹಾಲು ಉತ್ಪಾದಕ ಮಂಡಳಿಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭ ದಲಿತ ಮಹಿಳೆ ಎಂಬ ಕಾರಣಕ್ಕೆ ಮೇಲ್ಜಾತಿಯವರು ತನಗೆ ನಿಂದಿಸಿ, ದೌರ್ಜನ್ಯ ಎಸಗಿದ್ದರು. ಇದರ ವಿರುದ್ಧ ಎಫ್‌ಐಆರ್ ದಾಖಲಿಸಿ, ಕೋರ್ಟ್‌ಗೆ ಹೋಗಿದ್ದೆ. ಆದರೆ ಕೋರ್ಟ್‌ನಲ್ಲಿ ತನ್ನ ಪರವಾಗಿದ್ದ ಮೂರು-ನಾಲ್ಕು ಸಾಕ್ಷಿದಾರರು ಹೇಳಿಕೆ ನೀಡದೇ ಹಿಂದೆ ಸರಿದಿದ್ದರು. ಹೀಗಾದರೆ ದಲಿತರಿಗೆ ನ್ಯಾಯ ಸಿಗುವುದು ಹೇಗೆ ಎಂದು ಸಂತ್ರಸ್ತೆ ಪ್ರತಿಭಾ ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ರವಿಕಾಂತೇಗೌಡ, ಯಾವುದೇ ದೌರ್ಜನ್ಯ ನಡೆದರೂ ಮೊದಲು ಪೊಲೀಸರಿಗೆ ದೂರು ನೀಡಬೇಕು. ಸಾಕ್ಷಿಗಳು ಇಲ್ಲದಿದ್ದರೂ ದೂರನ್ನು ನೀಡಲು ಮುಂದಾಗಬೇಕು. ಇದರಿಂದ ತಪ್ಪಿತಸ್ಥರಿಗೆ ಭಯ ಹುಟ್ಟಿಸಿದಂತಾಗುತ್ತದೆ. ಸುಮ್ಮನೆ ಕುಳಿತರೆ ದೌರ್ಜನ್ಯ ಹೆಚ್ಚುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದರು.

‘ತಾನು ಮೇ 31ರಂದು ಜ್ಯೋತಿ ಸರ್ಕಲ್‌ನಿಂದ ಪುತ್ತೂರಿಗೆ ಬಸ್‌ನಲ್ಲಿ ಸಂಚರಿಸುತ್ತಿದ್ದಾಗ ಕಿಟಕಿ ಹಾಕುವ ವಿಚಾರದಲ್ಲಿ ಮೂವರು ಪೊಲೀಸ್ ಸಿಬ್ಬಂದಿ ತನಗೆ ನಿಂದಿಸಿದ್ದಾರೆ. ಪುತ್ತೂರಿನಲ್ಲಿ ಬಸ್‌ನಿಂದ ಇಳಿಯುವ ಸಂದರ್ಭ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ’ ಎಂದು ಟ್ರೇನರ್ ಕೃಷ್ಣಪ್ಪ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ರವಿಕಾಂತೇಗೌಡ, ಪೊಲೀಸ್ ಇಲಾಖೆಯ ಸಿಬ್ಬಂದಿಯ ಮನಸ್ಥಿತಿ ಬದಲಾಗಬೇಕು. ಹೆಚ್ಚಿನ ಶಿಕ್ಷಣ ಹೊಂದಿದವರು ಕೂಡ ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾಗಿ ಬರುತ್ತಿದ್ದಾರೆ. ಉನ್ನತ ಶಿಕ್ಷಣ ಹೊಂದಿದರು ಸಾಮಾನ್ಯ ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದು ತಿಳಿದಿರುವುದಿಲ್ಲ. ಕೆಲವರು ದೇಹದಲ್ಲಿ ದೆವ್ವ ಹೊಕ್ಕವರಂತೆ ವರ್ತಿಸುತ್ತಾರೆ. ಇದು ವಿಷಾದನೀಯ. ಯಾರೇ ಆಗಲಿ ದೌರ್ಜನ್ಯ, ದರ್ಪ ತೋರಿದರೆ ದೂರು ನೀಡಲು ಹಿಂಜರಿಯಬಾರದು ಎಂದು ತಿಳಿಸಿದರು.

‘ಶಿರಾಡಿ ರಸ್ತೆಯಲ್ಲಿ ಸಂಚಾರ ಬಂದ್ ಆಗಿದ್ದರಿಂದ ಚಾರ್ಮಾಡಿ ಘಾಟ್‌ನಲ್ಲಿ ಮಧ್ಯಾಹ್ನದ ವೇಳೆ ಬಸ್, ಮತ್ತಿತರ ವಾಹನಗಳನ್ನು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಈ ವೇಳೆ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟ್ರಾಫಿಕ್ ನಿರ್ಮಾಣವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಸ್ಥಳೀಯರೊಬ್ಬರು ಒತ್ತಾಯಿಸಿದರು.

ಸೆಲ್ಫಿ ತೆಗೆದುಕೊಳ್ಳುತ್ತಿರುವುದರಿಂದ ಟ್ರಾಫಿಕ್ ಉಂಟಾಗುತ್ತಿದೆ ಎನ್ನಲಾದ ಜಾಗದಲ್ಲಿ ಎಚ್ಚರಿಕೆಯ ಬೋರ್ಡ್‌ವೊಂದನ್ನು ಹಾಕುವಂತೆ ಎಸ್ಪಿ ಸ್ಥಳೀಯ ಪೊಲೀಸರಿಗೆ ಸೂಚಿಸಿದರಲ್ಲದೆ ದಿನಕ್ಕೆ ನಾಲ್ಕೈದು ಬಾರಿ ಆ ಜಾಗಕ್ಕೆ ಪೊಲೀಸರು ಭೇಟಿ ನೀಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News