ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು ವತಿಯಿಂದ ವೈದ್ಯರ ದಿನಾಚರಣೆ
ಮಂಗಳೂರು, ಜು.1: ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಫೊರೆನ್ಸಿಕ್ ಮೆಡಿಸಿನ್ ಮತ್ತು ಟೊಕ್ಸಿಕಾಲಜಿ ವಿಭಾಗವು ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯದ ಸಹಯೋಗದಲ್ಲಿ ‘ವೈದ್ಯಕೀಯ ದಾಖಲೆಗಳು ಹಾಗೂ ಕಾನೂನಿನ ದೃಷ್ಟಿಯಲ್ಲಿ ಅವುಗಳಿಗೆ ಇರುವ ಮಹತ್ವ’ ಎಂಬ ವಿಷಯದ ಕುರಿತು ‘ಕ್ವೆಸ್ಟ್-2018’ ಕಾರ್ಯಕ್ರಮವನ್ನು ರವಿವಾರ ಏರ್ಪಡಿಸಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಎಸಿಪಿ ರಾಮರಾವ್ ವೈದ್ಯಕೀಯ ದಾಖಲೆಗಳಿಗೆ ಕಾನೂನಿನ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ರೋಗಿಯ ಸಮಗ್ರ ವಿವರಗಳು ನಮೂದಾಗುವಂತೆ ವೈದ್ಯಕೀಯ ದಾಖಲೆಗಳನ್ನು ನಿರ್ವಹಣೆ ಮಾಡಿಕೊಂಡು ಬರಬೇಕು ಎಂದು ಸಲಹೆ ನೀಡಿದರು.
ಅಪಘಾತ, ಕೊಲೆ, ಅಸಹಜ ಸಾವು ಮತ್ತಿತರ ಪ್ರಕರಣಗಳಲ್ಲಿ ವೈದ್ಯರು ದಾಖಲಿಸುವ ಮಾಹಿತಿಗಳಿಗೂ ಪೊಲೀಸರು ದಾಖಲಿಸುವ ಮಾಹಿತಿಗಳಿಗೂ ಪರಸ್ಪರ ಸಾಮ್ಯತೆ ಇದ್ದರೆ ಮಾತ್ರ ನ್ಯಾಯಾಲಯದಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಪೊಲೀಸರು ವಿವಿಧ ಪ್ರಕರಣಗಳಲ್ಲಿ ಹೇಳಿಕೆಗಳನ್ನು ಪಡೆದು ದಾಖಲಿಸುವಾಗ ಸಮಗ್ರ ಮಾಹಿತಿಯನ್ನು ಪಡೆದು ನಮೂದಿಸುತ್ತಾರೆ. ಅದೇ ರೀತಿ ವೈದ್ಯರು ಕೂಡಾ ಸಂಪೂರ್ಣ ವಿವರಗಳನ್ನು ದಾಖಲಿಸಬೇಕು ಎಂದು ರಾಮ್‌ರಾವ್ ಹೇಳಿದರು.
ವಿದ್ಯಾರ್ಥಿಗಳು ಫೇಸ್‌ಬುಕ್, ವಾಟ್ಸಪ್ ಮತ್ತಿತರ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಬಗ್ಗೆ ಎಚ್ಚರಿಕೆಯಿಂದಿರಬೇಕು. ಅವಹೇಳನಕಾರಿ ಮೆಸೇಜ್ ಹಾಕಿ ಡಿಲೀಟ್ ಮಾಡಿದರೂ ಅದನ್ನು ಪತ್ತೆ ಹಚ್ಚಲಾಗುತ್ತದೆ. ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡೇ ಗಾಂಜಾ ಮತ್ತು ಇತರ ಮಾದಕ ವಸ್ತುಗಳ ವ್ಯವಹಾರ ನಡೆಯುತ್ತಿದ್ದು, ಇದಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ. ರಿಚಾರ್ಡ್ ಎ. ಕುವೆಲ್ಲೊ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತಾಧಿಕಾರಿ ಫಾ. ವಿನ್ಸೆಂಟ್ ವಿನೋದ್ ಸಲ್ದಾನ್ಹಾ, ಫಾ. ಸಿಲ್ವೆಸ್ಟರ್ ಲೋಬೊ ಮುಂತಾದವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡಾ. ನಾಗೇಶ್ ಕೆ.ಆರ್. ಮತ್ತು ಡಾ. ಹರೀಶ್ ಗೌಡ, ಎಸ್‌ಡಿಎಂ ಕಾನೂನು ಕಾಲೇಜಿನ ಉಪನ್ಯಾಸಕ ಮಹೇಶ್‌ಚಂದ್ರ, ಎ.ಜೆ. ಮೆಡಿಕಲ್ ಕಾಲೇಜಿನ ಡಾ. ಫ್ರಾನ್ಸಿಸ್ ಅವರು ವೈದ್ಯಕೀಯ ದಾಖಲೆಗಳ ಮಹತ್ವದ ಕುರಿತು ವಿವಿಧ ಮಾಹಿತಿ ನೀಡಿದರು.
ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ರಸಾದ್ ಕೆ. ಸ್ವಾಗತಿಸಿದರು. ಫೊರೆನ್ಸಿಕ್ ಮೆಡಿಸಿನ್ ಮತ್ತು ಟೊಕ್ಸಿಕಾಲಜಿ ವಿಭಾಗದ ಮುಖ್ಯಸ್ಥೆ ಹಾಗೂ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಮಡೊನ್ನಾ ಜೋಸೆಫ್ ವಂದಿಸಿದರು.