ಜಿಎಸ್‌ಟಿ ಜಾರಿ ಬಾಧಕವಲ್ಲ: ಜೇಟ್ಲಿ

Update: 2018-07-01 14:44 GMT

ಹೊಸದಿಲ್ಲಿ,ಜು.1: ಸರಕು ಹಾಗೂ ಸೇವೆಗಳ ತೆರಿಗೆ(ಜಿಎಸ್‌ಟಿ)ಯನ್ನು ಕನಿಷ್ಠ ಬಾಧಕ ರೀತಿಯಲ್ಲಿ ಜಾರಿಗೊಳಿಸುವಲ್ಲಿ ಭಾರತವು ಯಶಸ್ವಿಯಾಗಿದೆ ಎಂದು ರವಿವಾರ ಇಲ್ಲಿ ಹೇಳಿದ ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಅವರು,ಸಮಾಜಕ್ಕೆ ಕೊಡುಗೆಗೆ ಸಂಬಂಧಿಸಿದಂತೆ ಈ ವ್ಯವಸ್ಥೆಯ ಅತ್ಯುತ್ತಮ ಫಲ ಇನ್ನಷ್ಟೇ ದೊರೆಯಬೇಕಿದೆ ಎಂದು ತಿಳಿಸಿದರು. 17 ಪರೋಕ್ಷ ತೆರಿಗೆಗಳು ಮತ್ತು ಹಲವಾರು ಮೇಲ್ತೆರಿಗೆಗಳನ್ನು ಜಿಎಸ್‌ಟಿಯಲ್ಲಿ ಒಗ್ಗೂಡಿಸಲಾಗಿದ್ದು,ಈ ವ್ಯವಸ್ಥೆ ಕಳೆದ ವರ್ಷದ ಜುಲೈ 1ರಂದು ಜಾರಿಗೊಂಡಿತ್ತು.

ಜಿಎಸ್‌ಟಿಯನ್ನು ಜಾರಿಗೊಳಿಸಿದ್ದ ದೇಶಗಳು ಹೆಚ್ಚಿನ ತೊಂದರೆಗಳಿಗೆ ಸಾಕ್ಷಿಯಾಗಿದ್ದವು ಎಂದ ಜೇಟ್ಲಿ,ಅದು ಭಾರತೀಯ ಆರ್ಥಿಕತೆಗೆ ಬಾಧೆಯನ್ನುಂಟು ಮಾಡುತ್ತದೆ ಎಂದು ತಾನೂ ಭಾವಿಸಿದ್ದೆ ಎಂದರು.

ಜಿಎಸ್‌ಟಿ ವ್ಯವಸ್ಥೆ ರವಿವಾರ ಒಂದು ವರ್ಷವನ್ನು ಪೂರ್ಣಗೊಳಿಸಿದ್ದು,ತನ್ನಿಮಿತ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ವೀಡಿಯೊ ಕಾನ್‌ಫರೆನ್ಸಿಂಗ್ ಮೂಲಕ ಭಾಗವಹಿಸಿ ಮಾತನಾಡುತ್ತಿದ್ದ ಅವರು,ಜಿಎಸ್‌ಟಿಯಂತಹ ಪ್ರಮುಖ ಸುಧಾರಣೆ ಒಂದು ಹದಕ್ಕೆ ಬರಲು ಕಾಲಾವಕಾಶ ಅಗತ್ಯವಿರುವುದರಿಂದ ಅದು ಪ್ರಸ್ತಾವಗೊಂಡಾಗ ತಾನೂ ಬಾಧಕ ಶಬ್ದವನ್ನು ಬಳಸುತ್ತಿದ್ದೆ. ಆದರೆ ಒಂದು ವರ್ಷದ ಅನುಭವದ ಬಳಿಕ ಜಿಎಸ್‌ಟಿ ಸುಧಾರಣೆಗೆ ಸಂಬಂಧಿಸಿದಂತೆ ಬಾಧಕ ಶಬ್ದವನ್ನು ಬಳಸಲು ಹಿಂದೆ ಮುಂದೆ ನೋಡುವಂತಾಗಿದೆ. ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಸುಲಲಿತವಾಗಿ ನಡೆದಿದ್ದು,ವಿಶ್ವದಲ್ಲೆಲ್ಲೂ ಹೀಗೆ ನಡೆದಿರಲಿಲ್ಲ. ಮೊದಲ ವರ್ಷದಲ್ಲಿ ಪರಿಣಾಮಕಾರಿ ಗಳಿಕೆಯನ್ನು ನಾವು ಕಂಡಿದ್ದೇವೆ. ಸಮಾಜಕ್ಕೆ ಕೊಡುಗೆಗೆ ಸಂಬಂಧಿಸಿದಂತೆ ಜಿಎಸ್‌ಟಿಯ ಅತ್ಯುತ್ತಮ ಫಲಿತಾಂಶ ಇನ್ನಷ್ಟೇ ದೊರೆಯಬೇಕಿದೆ ಎಂದು ಹೇಳಿದರು.

ಜಿಎಸ್‌ಟಿಯು ದೇಶದ ಜಿಡಿಪಿಯ ಮೆಲೆ ದೀರ್ಘಾವಧಿ ಪರಿಣಾಮವನ್ನು ಬೀರಲಿದೆ. ಜೊತೆಗೆ ವ್ಯವಹಾರ ನಿರ್ವಹಣೆ,ವ್ಯಾಪಾರ ಮತ್ತು ಕೈಗಾರಿಕೆಗಳ ವಿಸ್ತರಣೆ,ಮೇಕ್ ಇನ್ ಇಂಡಿಯಾ ಇವುಗಳನ್ನು ಸುಗಮಗೊಳಿಸಲಿದೆ. ಪ್ರಾಮಾಣಿಕ ವ್ಯವಹಾರಗಳನ್ನು ಅದು ಉತ್ತೇಜಿಸಲಿದೆ ಎಂದ ಜೇಟ್ಲಿ,ತೆರಿಗೆ ಸಂಗ್ರಹವು ಹೆಚ್ಚುತ್ತ ಹೋದಂತೆ ತೆರಿಗೆ ಹಂತಗಳು ಮತ್ತು ತೆರಿಗೆ ದರಗಳನ್ನು ಪರಿಷ್ಕರಿಸುವ ಅವಕಾಶಗಳೂ ಹೆಚ್ಚಲಿವೆ ಎಂದು ಹೇಳಿದರು.

ಜನರು ತಮ್ಮ ವ್ಯವಹಾರಗಳ ಎಲ್ಲ ವಿವರಗಳನ್ನು ಬಹಿರಂಗಗೊಳಿಸುವಂತೆ ಮಾಡಲು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪರಿಣಾಮಕಾರಿ ಮಾರ್ಗವಾಗಿದೆ ಮತ್ತು ದಕ್ಷ ತೆರಿಗೆ ವ್ಯವಸ್ಥೆಯು ತೆರಿಗೆ ವಂಚನೆಗೆ ಅವಕಾಶ ನೀಡುವುದಿಲ್ಲ ಎಂದ ಅವರು,ಇ-ವೇ ಬಿಲ್ ಅನ್ನು ಈಗಾಗಲೇ ಜಾರಿಗೊಳಿಸಲಾಗಿದೆ ಮತ್ತು ಇನ್ವಾಯ್ಸಾ ಹೋಲಿಕೆ ವ್ಯವಸ್ಥೆ ಅಸ್ತಿತ್ವಕ್ಕೆ ಬಂದನಂತರ ತೆರಿಗೆ ವಂಚನೆಯನ್ನು ಪತ್ತೆ ಹಚ್ಚುವುದು ಸುಲಭವಾಗಲಿದೆ ಎಂದರು.

ಜಿಎಸ್‌ಟಿಯ ಬಳಿಕ ನೇರ ತೆರಿಗೆ ಸಂಗ್ರಹದಲ್ಲಿ ಶೇ.18 ಏರಿಕೆ

ಜಿಎಸ್‌ಟಿ ಮತ್ತು ನೋಟು ನಿಷೇಧದಿಂದಾಗಿ ಕಳೆದ ವರ್ಷ ನೇರ ತೆರಿಗೆಗಳ ಸಂಗ್ರಹದಲ್ಲಿ ಶೇ.18ರಷ್ಟು ಏರಿಕೆಯಾಗಿದೆ ಎಂದ ಜೇಟ್ಲಿ,ಕಳೆದ ನಾಲ್ಕು ವರ್ಷಗಳ ಎನ್‌ಡಿಎ ಆಡಳಿತದಲ್ಲಿ ಒಟ್ಟು ತೆರಿಗೆಗಳಲ್ಲಿ ಶೇ.1.5ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.

ತೆರಿಗೆ ಪಾವತಿಸುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ. ಜಿಎಸ್‌ಟಿ ಜಾರಿಯಿಂದಾಗಿ ಬದಲಾವಣೆಗಳಾಗುತ್ತಿವೆ ಎಂದ ಅವರು,ಈ ವರ್ಷದ ಮೊದಲ ತ್ರೈಮಾಸಿಕವು ಮುಂಗಡ ಪಾವತಿಗಳನ್ನು ತೋರಿಸುತ್ತಿದೆ. ಒಟ್ಟು ಮೊತ್ತವು ಶೇ.44ರಷ್ಟು ಏರಿಕೆಯಾಗಿದೆ ಎಂದರು.

ಭವಿಷ್ಯದಲ್ಲಿ ಜಿಎಸ್‌ಟಿ ದರಗಳು ಯುಕ್ತಾಯುಕ್ತ ಪರಿಷ್ಕರಣೆಗೊಳಗಾಗಲಿವೆ ಮತ್ತು ಇನ್ನಷ್ಟು ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ ಸೇರಲಿವೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News