×
Ad

ನಾಗರಿಕ ಸೇವೆಗಳು ಧರ್ಮಾಂಧತೆಯ ಗಾಳಕ್ಕೆ ಸಿಲುಕುತ್ತಿವೆ: ಮಾಜಿ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ

Update: 2018-07-01 20:24 IST

ಹೊಸದಿಲ್ಲಿ, ಜು.1: ನಾಗರಿಕ ಸೇವೆಗಳು ಇಂದು ಜಾತಿವಾದ ಮತ್ತು ಧರ್ಮಾಂಧತೆಯ ಗಾಳಕ್ಕೆ ಸಿಲುಕುತ್ತಿವೆ ಎಂದು ಮಾಜಿ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಪಡೆಗಳು ಮತ್ತು ನಾಗರಿಕ ಸೇವೆಗಳು ದೇಶದ ರಾಜಕೀಯ ಆಡಳಿತಗಾರರ ಹಿತಾಸಕ್ತಿಗಳಿಗೆ ಬಲಿಯಾಗುವುದನ್ನು ತಡೆಯಲು ಅಗತ್ಯ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಇಲ್ಲಿ ಆಯೋಜಿಸಿದ್ದ ‘ಪ್ರಜೆಗಳ ಸಮಾವೇಶ’ದಲ್ಲಿ ಮಾತನಾಡುತ್ತಿದ್ದ ಅವರು,ಸೇವೆಗಳಲ್ಲಿದ್ದ ಅತ್ಯುನ್ನತ ಮಟ್ಟದ ವೃತ್ತಿಪರತೆಯನ್ನು ಮರಳಿ ತರಬೇಕಾಗಿದೆ. ಸರಕಾರಿ ನೌಕರರು ತಮ್ಮ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುವ ಪ್ರವೃತ್ತಿಯನ್ನು ಕೈಬಿಟ್ಟು,ದಕ್ಷತೆಯಿಂದ ಕಾರ್ಯಾಚರಿಸಲು ಆರಂಭಿಸಬೇಕಿದೆ ಎಂದು ಹೇಳಿದರು. ಹಲವಾರು ನಿವೃತ್ತ ಅಧಿಕಾರಿಗಳು ಮತ್ತು ಮಾಜಿ ಯೋಧರು ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು.

ದೇಶವು ಪ್ರಜಾಪ್ರಭುತ್ವದ ಸ್ಥಾಪಿತ ಸ್ವರೂಪವನ್ನು ಸಂರಕ್ಷಿಸುವ ಸವಾಲನ್ನು ಎದುರಿಸುತ್ತಿದೆ ಎಂದ ಹಬೀಬುಲ್ಲಾ,ನ್ಯಾಯಾಂಗ,ನಾಗರಿಕ ಸೇವೆಗಳು ಮತ್ತು ರಕ್ಷಣಾ ಪಡೆಗಳನ್ನು ರಾಜಕೀಯ ಸಿದ್ಧಾಂತಗಳಿಂದ ಸ್ವತಂತ್ರವಾಗಿರಿಸಬೇಕಿದೆ ಎಂದು ಹೇಳಿದರು.

ಅಪಾಯವು ವ್ಯವಸ್ಥೆಯೊಳಗೇ ಅಡಗಿದೆ. ರಕ್ಷಣಾ ಪಡೆಗಳು ಮತ್ತು ಸರಕಾರಿ ಅಧಿಕಾರಿಗಳು ಅಧಿಕಾರದಲ್ಲಿರುವರ ತಲೆಹಿಡುಕರಂತಾಗಿದ್ದಾರೆ ಎಂದು ಏರ್ ಮಾರ್ಷಲ್(ನಿವೃತ್ತ) ವೀರ ನಾರಾಯಣ ಹೇಳಿದರು.

ಸರಕಾರಿ ಅಧಿಕಾರಿಗಳು ಮತ್ತು ನಾಗರಿಕ ಸೇವಕರು ಉತ್ತರದಾಯಿತ್ವವನ್ನು ಪ್ರದರ್ಶಿಸಬೇಕು ಎಂದು ಹೇಳಿದ ಆರ್‌ಟಿಐ ಕಾರ್ಯಕರ್ತೆ ಹಾಗೂ ಮಾಜಿ ಐಎಎಸ್ ಅಧಿಕಾರಿ ಅರುಣಾ ರಾಯ್,ಅವರು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುವಂತೆ ಸಾರ್ವಜನಿಕರನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News