ಮಂಗಳೂರಿನಲ್ಲಿ ವಿಶ್ವ ವೈದ್ಯರ ದಿನಾಚರಣೆ
ಮಂಗಳೂರು, ಜು.1: ಭಾರತೀಯ ವೈದ್ಯಕೀಯ ಸಂಘ ಮಂಗಳೂರು, ರೆಡ್‌ಕ್ರಾಸ್, ಕೆನರಾ ಆರ್ಥೋಪಿಡಿಕ್ ಸಂಸ್ಥೆಯ ವತಿಯಿಂದ ರವಿವಾರ ನಗರದ ಐಎಂಎ ಹಾಲ್‌ನಲ್ಲಿ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ವೈದ್ಯ ಡಾ. ಶಾಂತರಾಮ ಶೆಟ್ಟಿ ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಪವಿತ್ರವಾದುದು. ರೋಗಿಗಳ ಜೀವ ರಕ್ಷಣೆಯೇ ವೈದ್ಯ ವೃತ್ತಿಯ ಪ್ರಮುಖ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ವೈದ್ಯ, ಶಿಕ್ಷಣತಜ್ಞ, ಸ್ವಾತಂತ್ರ್ಯ ಹೋರಾಟಗಾರ, ಶ್ರೇಷ್ಠ ರಾಜಕೀಯ ಧುರೀಣ ಡಾ. ಬಿ.ಸಿ. ರಾಯ್ ಅವರ ಜನ್ಮದಿನವನ್ನು ವೈದ್ಯರ ದಿನವನ್ನಾಗಿ ಆಚರಿಸುವುದು ವೈದ್ಯ ಸಮೂಹಕ್ಕೆ ಲಭಿಸಿದ ಮನ್ನಣೆಯಾಗಿದೆ. ಡಾ. ಬಿ.ಸಿ.ರಾಯ್ ಅವರ ಸೇವೆ, ಅವರ ಆದರ್ಶ ಪಾಲನೆ ಎಲ್ಲ ವೈದ್ಯರ ಜವಾಬ್ದಾರಿಯಾಗಲಿ ಎಂದು ಡಾ. ಶಾಂತರಾಮ ಶೆಟ್ಟಿ ನುಡಿದರು.
ರೆಡ್‌ಕ್ರಾಸ್ ಸಂಸ್ಥೆಯ ಡಾ. ಸುಶೀಲ್ ಜತ್ತಣ್ಣ ಮಾತನಾಡಿ, ವೈದ್ಯರು ಪ್ರತಿದಿನವೂ ಹೊಸ ಸವಾಲನ್ನು ಎದುರಿಸುತ್ತಾರೆ. ರೋಗಿಗಳ ಜೀವ ಉಳಿಸುವ ಹೊಣೆಯ ಜತೆಗೆ ಸ್ವಾಸ್ಥ್ಯ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು ಕೂಡಾ ವೈದ್ಯರ ಕರ್ತವ್ಯವಾಗಿದೆ ಎಂದರು.
ರೆಡ್‌ಕ್ರಾಸ್ ಮೂಲಕ ರಕ್ತನಿಧಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಡಾ. ಬಿ.ಸಿ.ರಾಯ್ ಅವರ ಜನ್ಮದಿನ ಆಚರಣೆ ವೈದ್ಯರಿಗೆ ಖುಷಿಯ ವಿಚಾರ. ನಿತ್ಯವೂ ರೋಗಿ, ಶಸ ಚಿಕಿತ್ಸೆ ಸಹಿತ ಇತರ ಕೆಲಸಗಳ ಒತ್ತಡದಲ್ಲಿದ್ದ ವೈದ್ಯರಿಗೆ ಸ್ವಲ್ಪ ಸಮಯವಾದರೂ ಬಿಡುವ ಸಿಗುವಂತಹ ಕಾರ್ಯಕ್ರಮ ಇದಾಗಿದೆ. ಜನ್ಮದಿನದ ಪ್ರಯುಕ್ತ ರಿಕ್ಷಾ ಚಾಲಕ ಮತ್ತು ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ, ಬಿಎಂಡಿ ಶಿಬಿರ, ರಕ್ತದಾನ ಶಿಬಿರ ನಡೆಸಲಾಗುತ್ತಿದೆ ಎಂದು ಡಾ. ಸುಶೀಲ್ ಜತ್ತಣ್ಣ ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಕೆ.ಆರ್. ಕಾಮತ್, ಪದಾಧಿಕಾರಿಗಳಾದ ಡಾ. ದಿವಾಕರ್, ಡಾ. ಈಶ್ವರ್, ಡಾ. ಅಣ್ಣಯ್ಯ ಕುಲಾಲ್ ಸಹಿತ ಹಲವು ವೈದ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.