ಅಡಿಗರು ಬದುಕು, ಸಾಹಿತ್ಯದ ಬಗ್ಗೆ ಹೊಸ ಎಚ್ಚರ ಮೂಡಿಸಿದ ಕವಿ: ರಾಜಶೇಖರ್

Update: 2018-07-01 17:11 GMT

ಉಡುಪಿ, ಜು.1: ಗೋಪಾಲಕೃಷ್ಣ ಅಡಿಗರು ಕನ್ನಡದ ಖ್ಯಾತ ಸಾಹಿತಿ ಪಿ. ಲಂಕೇಶ್ ಹೇಳಿದಂತೆ ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’. ಬದುಕು ಮತ್ತು ಸಾಹಿತ್ಯದ ಕುರಿತಂತೆ ನಮ್ಮಲ್ಲಿ ಒಂದು ಹೊಸ ಎಚ್ಚರ ಮೂಡಿಸಿದವರು ಎಂದು ಕನ್ನಡದ ಖ್ಯಾತ ವಿಮರ್ಶಕ, ಚಿಂತಕ ಜಿ.ರಾಜಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿಯ ಪಥಬೀದಿ ಗೆಳೆಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಹಮ್ಮಿಕೊಂಡ ‘ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಂತರದ ದಿನಗಳಲ್ಲಿ ಲಂಕೇಶ್ ಅವರು ಅಡಿಗರ ವಿರುದ್ಧ ತಿರುಗಿ ಬಿದ್ದ ಸಾಕ್ಷಿಯಾದರೂ, ಕಟು ಟೀಕಾಕಾರರಾದರೂ, ಕವಿಯ ಬಗ್ಗೆ ಲಂಕೇಶ್ ಉತ್ಸಾಹದಲ್ಲಿ ಆಡಿದ ಮಾತು ಎಂದೂ ಸುಳ್ಳಾಗುವುದಿಲ್ಲ. ನಿಜಕ್ಕೂ ಅಡಿಗರು ಒಂದು ಜನಾಂಗದ ಕಣ್ಣು ತೆರೆಸಿದ ಕವಿಯಾಗಿದ್ದಾರೆ ಎಂದರು.

ಕೇವಲ ಔಪಚಾರಿಕವಾದ ಮಾತು, ಸೋಗಲಾಡಿತನದ ಸೌಜನ್ಯ ಮುಂತಾ ದವುಗಳನ್ನು ಅವರು ತನ್ನ ಕಾವ್ಯದ ಹತ್ತಿರಕ್ಕೂ ಬಿಟ್ಟುಕೊಳ್ಳದಂತೆ ಎಚ್ಚರ ವಹಿಸಿದ್ದರು. ಯಾವ ಬಗೆಯ ಕಸುಬುಗಾರಿಕೆ ಕಾವ್ಯದ ಮಾತನ್ನು ನಿಜಗೊಳಿಸುತ್ತದೆ ಎಂಬ ಶೋಧನೆಯಲ್ಲಿ ಅವರು ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರು. ತನ್ನ ಅನುಭವ ಓದುಗನಿಗೆ ‘ಅಹುದಹುದು’ ಅನ್ನಿಸುವ ಹಾಗೆ ಅನುಭವವೇದ್ಯಗೊಳಿಸುವುದು ಹೇಗೆ ಎಂಬ ಬಗ್ಗೆ ಅಡಿಗರು ಸದಾ ಯೋಚಿಸಿದವರು. ತನ್ನ ಕಾವ್ಯ ತನ್ನ ಅನುಭವದ ಅಭಿವ್ಯಕ್ತಿಯಾಗಬೇಕೆಂದು ಹಠ ತೊಟ್ಟವರು ಎಂದು ಅಡಿಗರ ಹಲವು ಕವನಗಳ ಉದಾಹರಣೆಗಳೊಂದಿಗೆ ರಾಜಶೇಖರ್ ನುಡಿದರು.

1968ರಿಂದ 1971ರವರೆಗೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾಗಿದ್ದ ಅಡಿಗರು, ಉಡುಪಿಗೆ ಸಂಬಂಧಿಸಿದಂತೆ ಬರೆದ ಎರಡು ಪ್ರಸಿದ್ಧ ಕವನಗಳಾದ ‘ಆನಂದತೀರ್ಥರಿಗೆ’ ಹಾಗೂ ‘ಶ್ರೀರಾಮ ನವಮಿಯ ದಿವಸ’ವನ್ನು ಸುದೀರ್ಘವಾಗಿ ವಿಶ್ಲೇಷಿಸಿದ ರಾಜಶೇಖರ್, ಅಡಿಗರ ಅನೇಕ ನಿಲುವುಗಳ ಕುರಿತು ನನಗೆ ಭಿನ್ನಮತವಿದೆ ಎಂದರು.

ಆನಂದತೀರ್ಥ ಕವನದಲ್ಲಿ ಉಡುಪಿಯ ಆದ್ಯಗುರು ಆನಂದತೀರ್ಥರು (ಮಧ್ವಾಚಾರ್ಯರು) ಹಾಗೂ ಅವರು ಪ್ರವರ್ತಿಸಿದ ಮಠಗಳ ಪರಂಪರೆ, ಅವರ ಜೀವನ ವೃತ್ತಾಂತವನ್ನು ಬೆರಗಿನಲ್ಲಿ ಬಣ್ಣಿಸುವ ಅಡಿಗರು, ಈಗ ಆನಂದ ತೀರ್ಥರ ಗಾಢಶ್ರದ್ಧೆ ಮಠೀಯ ವ್ಯವಸ್ಥೆಯಾಗಿದೆ. ಉಜ್ವಲವಾಗಿ ಬೆಳಗಿದ ಪರಂಪರೆಯೊಂದು ಕ್ರಮೇಣ ಅವನತಿ ಹಾದಿ ಹಿಡಿದಿದೆ.ಅವರು ಸ್ಥಾಪಿಸಿದ ಮಠ ಕುಸಿಯುತ್ತಿದೆ. ಅದನ್ನು ಉಳಿಸಲು ಮತ್ತೆ ಹುಟ್ಟಿ ಬರುವಂತೆ ಆರ್ತರಾಗಿ ಮೊರೆ ಇಡುತ್ತಾರೆ ಎಂದರು.

ಅಡಿಗರು 1969ರಲ್ಲಿ ರಚಿಸಿದ ಈ ಕವಿತೆಯನ್ನು 2018ರಲ್ಲಿ ಓದುವಾಗ ಉಡುಪಿಯ ಅವನತಿ ಅಡಿಗರು ಚಿತ್ರಿಸಿದ್ದಕ್ಕಿಂತ ಹೆಚ್ಚು ವಿಷಮವಾಗಿದೆ. ಅಡಿಗರು ಕವನದಲ್ಲಿ ನಿರೂಪಿಸಿದ ಕ್ಷೇತ್ರದ ಸೋಗಲಾಡಿತನ ಹಾಗೂ ಕರ್ಮಠ ಆಚರಣೆ ಉಳಿದ ಧಾರ್ಮಿಕ ಕ್ಷೇತ್ರಗಳಲ್ಲಿ ಕಂಡುಬಂದರೂ, ಉಡುಪಿಯ ಧಾರ್ಮಿಕತೆ ಎದುರಿಸುತ್ತಿರುವ ಬಿಕ್ಕಟ್ಟು ನಮ್ಮ ಕಾಲದ ಪ್ರಭುತ್ವ ಕೇಂದ್ರಿತ ರಾಜಕೀಯದ ಕೊಡುಗೆ ಎಂದು ವಿಶ್ಲೇಷಿಸಿದರು.

‘ಶ್ರೀರಾಮನವಮಿಯ ದಿವಸ’ ಕವಿತೆಯಲ್ಲಿ ಅಡಿಗರು ಚಿತ್ರಿಸುವ ರಾಮ ಈಗಾಗಲೇ ಪರಿಪೂರ್ಣನಾಗಿರುವ ದೇವತೆಯೂ ಅಲ್ಲ. ಸಿದ್ಧವಾಗಿರುವ ದೇವರ ಪ್ರತಿಮೆಯೂ ಅಲ್ಲ. ಅಡಿಗರ ರಾಮ, ವೃತ, ತಪಸ್ಸು, ಕಾಯುವಿಕೆ, ನೋಂಪು ಮತ್ತು ಧಾನ್ಯಗಳಿಂದ ಸಾಕ್ಷಾತ್ಕರಿಸಿಕೊಳ್ಳಬೇಕಾದವ. ಆದರೆ ಅಡಿಗರು ಬೆಂಬಲಿಸಿದ ರಾಮಜನ್ಮ ಭೂಮಿ ಚಳವಳಿ ಅಡಿಗರ ಕವಿತೆ ಎತ್ತಿ ಹಿಡಿಯುವ ರಾಮಾಯಣ ಪರಂಪರೆಯನ್ನೇ ಬುಡಬೇರು ಸಹಿತ ಕಿತ್ತೆಸೆದಿದೆ ಎಂದರು.
ಉಡುಪಿಯಲ್ಲಿ ಪ್ರಾಂಶುಪಾಲರಾಗಿರುವಾಗಲೇ ಅಂದಿನ ಜನಸಂಘದಿಂದ ಲೋಕಸಭಾ ಚುನಾವಣೆಗೆ ಬೆಂಗಳೂರಿನಿಂದ ಸ್ಪರ್ಧಿಸಿದ್ದ ಅಡಿಗರಿಗೆ ಇದಕ್ಕೆ ಮೊದಲಾಗಲಿ, ಅನಂತರವಾಗಲೀ ಜನಸಂಘ/ಬಿಜೆಪಿಗಳ ಹಿಂದುತ್ವ ರಾಜಕೀಯಕ್ಕೂ ಹೇಳಿಕೊಳ್ಳುವ ನಿಕಟ ಸಂಬಂಧವಿರಲಿಲ್ಲ. ಅವರ ಕವಿತೆಗಳಲ್ಲಿ ಹೆಚ್ಚಿನವು ಧಾರ್ಮಿಕತೆಯ ಹಠ, ಜಡತ್ವ ಮತ್ತು ಕರ್ಮಠತನಗಳನ್ನು ಹೀಗೆಳೆಯುವಂತಹವು ಎಂದರು.

ಆದರೂ ಅಡಿಗರು ಹಿಂದುತ್ವದ ಪ್ರತಿಪಾದಕರಿಗೆ ಪ್ರಿಯವಾಗಬಹುದಾದ ಎರಡು ಕವಿತೆಗಳನ್ನು -ಮತ್ತೆ ಮೊಳಗಲಿ ಇಲ್ಲಿ ಪಾಂಚಜನ್ಯ ಹಾಗೂ ಅಂಬೇಡಕರ ಭೀಮರಾಯರಿಗೆ- ಬರೆದಿರುವುದನ್ನು ಗುರುತಿಸಿದ್ದೇನೆ. ಇದರಲ್ಲಿ ಅಂಬೇಡಕರ ಕವನದ್ದುದಕ್ಕೂ ಅಡಿಗರು ಆಧಾರವೇ ಇಲ್ಲದ ಅಭಿಪ್ರಾಯಗಳು, ಏಕಪಕ್ಷೀಯ ಘೋಷಣೆ ಹಾಗೂ ಸುಳ್ಳೇ ಮುಖಸ್ತುತಿಯ ಮಾತುಗಳಿವೆ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಅಡಿಗ ಟ್ರಸ್ಟ್‌ನ ಜಯರಾಮ ಅಡಿಗ ಮುಖ್ಯ ಅತಿಥಿಯಾಗಿದ್ದರು. ಅಕಾಡೆಮಿಯ ಸದಸ್ಯ ಸಂಚಾಲಕಿ ಮುಮ್ತಾಜ್ ಬೇಗಂ, ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಉಪಸ್ಥಿತರಿದ್ದರು.

ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಅತಿಥಿಗಳನ್ನು ಸ್ವಾಗತಿಸಿದರೆ, ಪ್ರೊ.ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಈಗ ಉಡುಪಿಯ ಆದಿದೈವ ಕೃಷ್ಣನಲ್ಲ. ಆನಂದತೀರ್ಥರು ಈಗ ಗುರುಗಳೂ ಅಲ್ಲ. ಬಲಿಷ್ಠ ರಾಷ್ಟ್ರಪ್ರಭುತ್ವವೇ ಈಗ ಕ್ಷೇತ್ರದ ಆರಾಧ್ಯದೈವ. ಆದರೆ ಉಡುಪಿ ತಾನು ಭಾಗವಾಗಲು ಬಯಸುವ ಬಲಿಷ್ಠ ಭಾರತ, ಮುಸ್ಲಿಮರು, ಕ್ರೈಸ್ತರನ್ನು ಎರಡನೇ ದರ್ಜೆಗಳ ಪ್ರಜೆಗಳನ್ನಾಗಿಸುತ್ತದೆ. ಆದಿವಾಸಿಗಳನ್ನು ಒಕ್ಕೆಲೆಬ್ಬಿಸಿ ನಿರ್ಗತಿಕರನ್ನಾಗಿಸುತ್ತದೆ. ಕಲ್ಪನೆಗೂ ಸಿಗದ ಪ್ರಮಾಣದ ಹಿಂಸೆ ಇಲ್ಲದೇ ಭಾರತ ಬಲಿಷ್ಠ ರಾಷ್ಟ್ರವಾಗುವುದಿಲ್ಲ. ನರಮೇಧ ನಡೆಯದೇ ಹಿಂದೂ ರಾಷ್ಟ್ರವಾಗುವುದಿಲ್ಲ. 

-ಜಿ.ರಾಜಶೇಖರ್

ನಮ್ಮ ಕಾಲದ ರಾಜಕೀಯದ ದಿಕ್ಕುದೆಸೆಗಳನ್ನು ಬದಲಾಯಿಸಿದ ಬಿಜೆಪಿ ನಾಯಕತ್ವದ ರಾಮಜನ್ಮ ಚಳವಳಿಗೆ ಉಡುಪಿಯ ಕೊಡುಗೆ ನಿರ್ಣಾಯಕವಾದುದು. ಈ ಚಳವಳಿಯಿಂದ ದೇಶದುದ್ದಕ್ಕೂ ಹಿಂದೆಂದೂ ಕಾಣದಷ್ಟು ವ್ಯಾಪಕವಾಗಿ ಹಬ್ಬಿದ ಕೋಮುದ್ವೇಷ ಹಾಗೂ ಹಿಂಸೆ ಆಸ್ತಿಕರು ಮತ್ತು ನಾಸ್ತಿಕರನ್ನು ಕಾಡಬೇಕು. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡ ಈ ದ್ವೇಷ ಮತ್ತು ಹಿಂಸೆಯ ಅಭಿಯಾನಕ್ಕೆ ಈಗ ದೇಶದಲ್ಲಿ ಯಾರೂ ಉತ್ತರದಾಯಿಗಳಲ್ಲ. ಕಾನೂನಿನ ದೃಷ್ಟಿಯಿಂದ ಕೂಡಾ ಯಾರೂ ಬಾಬರಿ ಮಸೀದಿ ದ್ವಂಸಕ್ಕಾಗಲೀ, ಅನಂತರದ ಹಿಂಸಾಕಾಂಡಕ್ಕಾಗಲಿ ಜವಾಬ್ದಾರರಲ್ಲ. ಕಡೆ ಪಕ್ಷ ಆರೋಪಿಗಳೂ ಅಲ್ಲ. ಉಡುಪಿಯ ಮಠಗಳಿಗೆ ಯಾಕೆ ಈ ನೈತಿಕ ಸಮಸ್ಯೆ ಬಾಧಿಸುವುದಿಲ್ಲ?ಅಥವಾ ಅದು ಪ್ರತಿಪಾದಿಸುವ ಹೊಸ ಧಾರ್ಮಿಕತೆಯಲ್ಲಿ ಅಂದರೆ ಆನಂದತೀರ್ಥರ ಶೃದ್ಧೆಗಿಂತ ಭಿನ್ನವಾದ ಧಾರ್ಮಿಕತೆಯಲ್ಲೇ ಈ ಹಿಂಸೆ ಮತ್ತು ಸಂವೇದನ ಶೂನ್ಯತೆ ಅಂತರ್ಗತವಾಗಿದೆಯೇ ?

 -ಜಿ.ರಾಜಶೇಖರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News