ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಜು. 2ರಿಂದ ವಿಚಾರಣೆ ಆರಂಭ
ಉಡುಪಿ, ಜು.1: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆಯು ಸೋಮವಾರ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರಂಭಗೊಳ್ಳಲಿದೆ.
ಪ್ರಕರಣದ ಒಟ್ಟು 167 ಸಾಕ್ಷಿಗಳ ಪೈಕಿ 44 ಮಂದಿ ಸಾಕ್ಷಿಗಳ ವಿಚಾರಣೆಯು ಜು.2, 3, 4, 5, 6 ಮತ್ತು 16, 17, 18 ಮತ್ತು 19ರಂದು ನಡೆಯಲಿದೆ. ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿಬಾಯಿ ಮೊದಲ ದಿನದ ವಾದದಲ್ಲಿ ನಾಳೆ ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ದೂರುದಾರರಾದ ಮೃತ ಭಾಸ್ಕರ್ ಶೆಟ್ಟಿಯ ತಾಯಿ ಗುಲಾಬಿ ಶೆಡ್ತಿಯ ಹೇಳಿಕೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಆರೋಪಿಗಳಾದ ಭಾಸ್ಕರ್ ಶೆಟ್ಟಿಯ ಪತ್ನಿ ರಾಜೇಶ್ವರಿ ಶೆಟ್ಟಿ(50), ಮಗ ನವನೀತ್ ಶೆಟ್ಟಿ(20) ಹಾಗೂ ನಂದಳಿಕೆಯ ನಿರಂಜನ್ ಭಟ್(26) ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಆರೋಪಿಗಳನ್ನು ಉಡುಪಿಗೆ ಕರೆ ತರದೆ ಜೈಲಿನಿಂದಲೇ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಸ ಲಾಗುತ್ತದೆ. ಸಾಕ್ಷನಾಶ ಆರೋಪಿಗಳಾದ ನಿರಂಜನ್ ಭಟ್ ಅವರ ತಂದೆ ಶ್ರೀನಿವಾಸ ಭಟ್(56) ಹಾಗೂ ಕಾರು ಚಾಲಕ ರಾಘವೇಂದ್ರ(26) ನಾಳೆ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಆರು ತಿಂಗಳೊಳಗೆ ವಿಚಾರಣೆ
ಪ್ರಕರಣದ ತನಿಖಾಧಿಕಾರಿ ನೀಡಿದ ಮಾಹಿತಿಯಂತೆ ಪ್ರಮುಖ 36 ಸಾಕ್ಷಿಗಳ ವಿಚಾರಣೆಯನ್ನು ಆರು ತಿಂಗಳೊಳಗೆ ನಡೆಸಿ ಆರೋಪಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ನೀಡುವಂತೆ ಸುಪ್ರೀಂ ಕೋರ್ಟ್ ಎ.23ರಂದು ಆದೇಶ ನೀಡಿತ್ತು.
ಅದರಂತೆ ಜಿಲ್ಲಾ ಸರಕಾರಿ ಅಭಿಯೋಜಕರು ಇನ್ನುಳಿದ ನಾಲ್ಕು ತಿಂಗ ಳೊಳಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ಸುಪ್ರೀಂ ಕೋರ್ಟ್ ಸೂಚಿಸಿದ ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ, ರಾಜೇಶ್ವರಿ ಶೆಟ್ಟಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕಾಗಿದೆ.