ಮೌಲ್ಯಯುತ ಶಿಕ್ಷಣದೊಂದಿಗೆ ಮುನ್ನಡೆಯಬೇಕು: ಯು.ಟಿ.ಖಾದರ್
ಕೊಣಾಜೆ, ಜು. 1: ಇಂದಿನ ವಿದ್ಯಾರ್ಥಿಗಳೇ ಮುಂದಿನ ಭಾರತದ ಭವಿಷ್ಯವಾಗಿದ್ದು, ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದೊಂದಿಗೆ ಮುನ್ನಡೆಯಬೇಕು. ವಿದ್ಯಾರ್ಥಿ ಸಂಸತ್ತಿನ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಸೇರಿದಂತೆ ಜವಾಬ್ಧಾರಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಇಂತಹ ಚಟುವಟಿಕೆಗಳು ವಿಧ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಅವರು ಹೇಳಿದರು.
ಅವರು ಸರಕಾರಿ ಪ್ರೌಢಶಾಲೆ ಕೊಣಾಜೆ ಪದವು ಇಲ್ಲಿಯ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮೂಡದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅವರು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಮಾದರಿಯಾಗಿದ್ದು ಇದರಿಂದಾಗಿಯೇ ಭಾರತ ಸದೃಢವಾಗಿ ಬೆಳೆದು ನಿಂತಿದೆ. ವಿದ್ಯಾರ್ಥಿ ಜೀವನದಲ್ಲೇ ನಾವು ಪ್ರಜಾತಂತ್ರ ವ್ಯವಸ್ಥೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಪಾಲ್ಗೊಳ್ಳಲು ಇಂತಹ ವಿದ್ಯಾರ್ಥಿ ಸಂಸತ್ತು ನಮಗೆ ಬಹಳಷ್ಟು ಅನುಕೂಲ ಮಾಡಿಕೊಡುತ್ತದೆ.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ ಮಾತನಾಡಿ, ಕೊಣಾಜೆ ಪದವು ಸರ್ಕಾರಿ ಶಾಲೆಯು ಸರ್ಕಾರಿ ಶಾಲೆ ಆದರೂ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಕಡಿಮೆ ಇಲ್ಲ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ವಿಫಲವಾಗಿದ್ದರೂ ಶಾಲೆಗೆ 97% ಫಲಿತಾಂಶ ಬಂದಿದೆ. ಅಲ್ಲದೆ ಹಲವಾರು ಪಠ್ಯೇತರ ಚಟುವಟಿಕೆಗಳು ಕೂಡಾ ಇಲ್ಲಿಯ ವಿದ್ಯಾರ್ಥಿಗಳ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಣಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಚ್ಯುತ ಗಟ್ಟಿ, ಉದ್ಯಮಿ ನಾಸೀರ್ ಕೆ.ಕೆ, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ಶೀನ ಶೆಟ್ಟಿ, ಶಾಲಾ ಮುಖ್ಯೋ ಪಾಧ್ಯಾಯಿನಿ ಮೀನಾ ಗಾಂವ್ಕರ್, ಹಸೈನಾರ್, ಜಯಪ್ರಸಾದ್, ಶಶಿಕಲಾ, ಅಬ್ದುಲ್ ರಹಿಮಾನ್ ಕೋಡಿಜಾಲ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ದೈಹಿಕ ಶಿಕ್ಷಕ ರಾಜೀವ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.