ಅಂಬ್ಲಮೊಗರುವಿನಲ್ಲಿ 500 ಮದರಸ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ಉಳ್ಳಾಲ, ಜು. 1: ಮೀನುಗಾರರ ಅಭಿವೃದ್ಧಿಗಾಗಿ ಆರಂಭಗೊಂಡ ಸಂಘ ಹಲವು ವರ್ಷಗಳಿಂದ ಸಾಮಾಜಿ ಬದ್ಧತೆಯೊಂದಿಗೆ ಶಿಕ್ಷಣಕ್ಕೆ ಪ್ರೋತ್ಸಾಹ, ಬಡ ರೋಗಿಗಳಿಗೆ ಧನಸಹಾಯ ಮಾಡುತ್ತಾ ಬರುವ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಮ್ಮೆಯಾಗಿ ಪರಿವರ್ತನೆಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ನಿಯಮಿತ ಉತ್ತರ ಧಕ್ಕೆ ಬಂದರು ಇದರ ವತಿಯಿಂದ ಅಂಬ್ಲಮೊಗರು ಕುಂಡೂರು ಕೇಂದ್ರ ಜುಮಾ ಮಸೀದಿ ಹಾಗೂ ಹಿಮಾಯತುಲ್ ಇಸ್ಲಾಂ ಸಹಕಾರದಲ್ಲಿ ಮದರಸದಲ್ಲಿ ಶನಿವಾರ ನಡೆದ ಮದರಸ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದರು.
ಯಾವುದೇ ಸಂಘಟನೆಗಳು ಸಮಾಜಕ್ಕಾಗಿ ಎಷ್ಟು ಖರ್ಚು ಮಾಡಿದರೂ ಉತ್ಪಾದನೆ ಹೆಚ್ಚಾಗುತ್ತಾ ಹೋಗುತ್ತದೆ, ಅದೇ ರೀತಿ ಆರಂಭದ ದಿನಗಳಲ್ಲಿ ಆತಂಕ ಎದುರಿಸಿದ್ದ ಮೀನುಗಾರರ ಸಂಘ ಸಾಮಾಜಿಕ ಸೇವೆಯೊಂದಿಗೆ ಆದಾಯ ಹೆಚ್ಚಿಸಿಕೊಂಡು ಅಭಿವೃದ್ಧಿಯಲ್ಲಿ ಮುನ್ನಡೆದಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಹಮ್ಮದ್ ಮುಸ್ತಫಾ ಮಲಾರ್ ಮಾತನಾಡಿ, ಮೀನುಗಾರರಿಗೆ ಸೀಮೆಎಣ್ಣೆ, ಡಿಸೇಲ್ ವಿತರಿಸಿ ಅದರಿಂದ ಬಂದ ಲಾಭದಲ್ಲೇ ಸಮಾಜ ಸೇವೆ ಮಾಡಲಾಗುತ್ತಿದೆ. ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಧನಸಹಾಯ ಮಾಡುತ್ತಿರುವ ಸಂಘ, ಕಳೆದ ವರ್ಷ ಜಾತಿ, ಧರ್ಮರಹಿತ 750 ಮಕ್ಕಳಿಗೆ ಶಾಲಾ ಪುಸ್ತಕ ನೀಡಿದ್ದರೆ, ಈ ಬಾರಿ 1000 ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಪ್ರಥಮ ಬಾರಿ ಧಾರ್ಮಿಕ ಶಿಕ್ಷಣ ಪ್ರೋತ್ಸಾಹಿಸುವ ಮದರಸ ಪುಸ್ತಕ ವಿತರಣೆ ಮಾಡಲಾಗುತ್ತಿದೆ ಎಂದರು.
ಮಸೀದಿಯ ಖತೀಬ್ ಅಬ್ದುಲ್ ರಶೀದ್ ಯಮಾನಿ ಉದ್ಘಾಟಿಸಿದರು. ಅಲ್ಪಸಂಖ್ಯಾತ ಮೀನುಗಾರರ ಸಂಘದ ಅಧ್ಯಕ್ಷ ಜೆ.ಮಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ನಿರ್ದೇಶಕರಾದ ಯು.ಟಿ.ಅಹ್‌ಮದ್ ಶರೀಫ್, ಎಂ.ಎ.ಗಫೂರ್, ಎಸ್.ಎಂ.ಇಬ್ರಾಹಿಂ, ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಮಲಾರ್ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ರಝಾಕ್ ಅರ್ಹರಿ, ಮಲಾರ್ ನೂರುಲ್ ಇಸ್ಲಾಂ ಮದರಸದ ಸದರ್ ಮುಅಲ್ಲಿಂ ಇರ್ಫಾನ್ ಮೌಲವಿ, ಹಿಮಾಯತುಲ್ ಇಸ್ಲಾಂ ಮದರಸದ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ದಾರಿಮಿ, ಮಜಾಲ್‌ತೋಟ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಅನ್ಸಾರಿ, ಎಲಿಯಾರ್ ಮಸ್ಜಿದುಲ್ ಫಲಾಹ್ ಖತೀಬ್ ರಿಯಾರ್ ಫೈಝಿ, ಪ್ರಮುಖರಾದ ಇಬ್ರಾಹಿಂ ಬಂಡಾರಪಾದೆ, ಅಬ್ದುಲ್ ಖಾದರ್, ಅಶ್ರಫ್ ಎಲ್ಯಾರ್ ಪದವು, ಮುಹಮ್ಮದ್ ಮುಸ್ಲಿಯಾರ್, ಅಬ್ದುಲ್ ಲತೀಫ್ ಪಾತೂರು, ಶಿಹಾಬುದ್ದೀನ್ ಅಝ್ಹರಿ, ಇಸ್ಮಾಯಿಲ್ ಮಲಾರ್, ಝಾಯೀದ್ ಮಲಾರ್ ವಕ್ಫ್ ಸದಸ್ಯ ಅಬೂಸಾಲಿ ಎಸ್.ಬಿ. ಇನ್ನಿತರರು ಉಪಸ್ಥಿತರಿದ್ದರು.
ಕಿಡ್ನಿ ವೈಫಲ್ಯ, ರೋಗಿಗೆ ಲಕ್ಷ ದೇಣಿಗೆ
ಕಾರ್ಯಕ್ರಮದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಸಂಘದಿಂದ ಒಂದು ಲಕ್ಷ ರೂಪಾಯಿಯ ಚೆಕ್ ಹಸ್ತಾಂತರಿಸಲಾಯಿತು. ಇದರಲ್ಲಿ 25 ಸಾವಿರ ರೂಪಾಯಿ ಸಂಘದಿಂದ ನೀಡಲಾಗಿದ್ದು, 75 ಸಾವಿರ ರೂಪಾಯಿ ನಿರ್ದೇಶಕ ಗೌರವಧನ ಮತ್ತು ದೇಣಿಗೆ ಸಂಗ್ರಹಿಸಿ ನೀಡಲಾಗಿದೆ.