×
Ad

ಕಾನೂನು ವಕೀಲರು, ನ್ಯಾಯಾಧೀಶರಿಗೆ ಸೀಮಿತವಲ್ಲ-ನ್ಯಾ. ಕಿಶನ್ ಬಿ. ಮಡಲಗಿ

Update: 2018-07-01 22:30 IST

ಪುತ್ತೂರು, ಜು. 1: ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ಕಾನೂನು ಅರಿವು ಪಡೆದುಕೊಳ್ಳಬೇಕು. ಕಾನೂನು ಕೇವಲ ವಕೀಲರಿಗೆ ಮತ್ತು ನ್ಯಾಯಾಧೀಶರಿಗೆ ಸೀಮಿತವಾಗಿಲ್ಲ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಕಿಶನ್ ಬಿ. ಮಡಲಗಿ ಹೇಳಿದರು.

ಅವರು ರವಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಪುತ್ತೂರು, ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಪುತ್ತೂರು ವತಿಯಿಂದ ಪುತ್ತೂರಿನ ಅನುರಾಗ ವಠಾರದಲ್ಲಿ ನಡೆದ ಕಟ್ಟಡ ಕಾರ್ಮಿಕರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಪ್ರಗತಿಯಲ್ಲಿ ಕಾರ್ಮಿಕರ ಶ್ರಮ ಬಹಳಷ್ಟಿದೆ. ಕಾರ್ಮಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳು, ಕುಟುಂಬದ ರಕ್ಷಣೆಯ ಸಂಬಂಧಿ ಕಾನೂನು, ಸರಕಾರದ ಸವಲತ್ತುಗಳ ಕುರಿತು ಅರಿವು ಹೊಂದಿರಬೇಕು. ತಮ್ಮ ಆರೋಗ್ಯದ ಕಾಳಜಿ ಮಾಡಿಕೊಂಡು ಸುಭದ್ರ ಬದುಕನ್ನು ಬಾಳಬೇಕು ಎಂದು ಹೇಳಿದರು.

ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಬಿ. ಪುರಂದರ ಭಟ್ ಮಾತನಾಡಿ ಎಲ್ಲರೂ ಪರಸ್ಪರ ಸೇರಿಕೊಂಡು ಅಭಿವೃದ್ಧಿ ಪಥದಲ್ಲಿ ಮುನ್ನಡೆದರೆ ಮಾತ್ರ ಕಲ್ಯಾಣ ರಾಜ್ಯ ಸಾಧ್ಯ. ಕೊಂಡಿ ತಪ್ಪಿದರೆ ಅರಾಜಕತೆ ಉಂಟಾಗುತ್ತದೆ. ಕಾನೂನು ಚೌಕಟ್ಟಿನಲ್ಲಿ ನಮ್ಮ ಬದುಕು ಸಾಗಬೇಕಿರುವುದು ಅನಿವಾರ್ಯ. ಸಮಾಜದ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಸೇವಾ ಸಂಸ್ಥೆಗಳು ಕಾನೂನು ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವ ಜವಾಬ್ದಾರಿ ತೋರಬೇಕು ಎಂದರು. ಪುತ್ತೂರು ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣಪ್ರಸಾದ್ ರೈ ಮಾತನಾಡಿ, ಯಾವುದೇ ಕಟ್ಟಡದ ಭದ್ರತೆಯ ಹಿಂದಿರುವ ಪರಿಶ್ರಮ ಕಾರ್ಮಿಕರದ್ದಾಗಿರುತ್ತದೆ. ಕಾರ್ಮಿಕರೂ ತಮಗೆ ಸಂಬಂಧಿಸಿದ ಕಾನೂನುಗಳ ಅರಿವು ಹೊಂದಿರಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ನ್ಯಾಯವಾದಿ ಶ್ಯಾಮ್‌ಪ್ರಸಾದ್ ಕೈಲಾರ್ ಸಂಪನ್ಮೂಲ ವ್ಯಕ್ತಿಯಾಗಿ ಕಟ್ಟಡ ಕಾರ್ಮಿಕರ ಕಾನೂನು ಮಾಹಿತಿ ನೀಡಿದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಅಧ್ಯಕ್ಷತೆ ವಹಿಸಿದ್ದರು. ಬೇಟಿ ಬಜಾವೋ ಬೇಟಿ ಪಡಾವೋ ತಾಲೂಕು ಸಮಿತಿ ಸದಸ್ಯ ಮತ್ತು ನ್ಯಾಯವಾದಿ ದಿವ್ಯರಾಜ್ ಹೆಗ್ಡೆ ಶುಭಹಾರೈಸಿದರು. ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮೋಹನ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಜಯರಾಮ ಕುಲಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News