×
Ad

ನಿಸ್ವಾರ್ಥ ಮನೋಭಾವವಿದ್ದರೆ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ: ಪ್ರೊ ನರೇಂದ್ರ ನಾಯಕ್

Update: 2018-07-01 22:38 IST

ಮೂಡುಬಿದಿರೆ, ಜು.1: ನಾನಂತೂ ಜೀವಮಾನದಲ್ಲಿ ಯಾರಿಗೂ ಲಂಚ ಕೊಟ್ಟಿಲ್ಲ, ಯಾರಿಂದಲೂ ಲಂಚ ಸ್ವೀಕರಿಸಿಲ್ಲ. ಲಂಚ ಸ್ವೀಕರಿಸುವುದು ಮತ್ತು ಲಂಚ ಕೊಡುವುದು ಎರಡೂ ಅಪರಾಧವೇ. ದೃಢ ಸಂಕಲ್ಪವಿದ್ದರೆ, ಕೊಂಚ ವಿವೇಚನೆ, ತಾಳ್ಮೆ, ನ್ಯಾಯಕ್ಕಾಗಿ ಹೋರಾಡುವ ಕೆಚ್ಚು ಎಲ್ಲಕ್ಕಿಂತಲೂ ಮುಖ್ಯವಾಗಿ ನಿಸ್ವಾರ್ಥ ಮನೋಭಾವವಿದ್ದರೆ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ’ ಎಂದು ಮಂಗಳೂರಿನ ಬಳಕೆದಾರರ ಶಿಕ್ಷಣ ಪ್ರತಿಷ್ಠಾನದ ಸಂಚಾಲಕ, ವಿಚಾರವಾದಿ ಪ್ರೊ ನರೇಂದ್ರ ನಾಯಕ್ ಹೇಳಿದರು.

ಮೂಡುಬಿದಿರೆಯ ಭ್ರಷ್ಟಾಚಾರ ವಿರೋಧ ಜಾಗೃತ ಸೇವಾದಳದ ನಾಲ್ಕನೇ ವಾರ್ಷಿಕೋತ್ಸವದಂಗವಾಗಿ ಸಮಾಜಮಂದಿರದ ಸ್ವರ್ಣ ಮಂದಿರದಲ್ಲಿ ರವಿವಾರ ಅಪರಾಹ್ನ ಏರ್ಪಡಿಸಲಾದ ‘ಮೂಡುಬಿದಿರೆ ಪುರಸಭಾ ಆಡಳಿತ ವೈಫಲ್ಯದ ಜನಜಾಗೃತಿ ಅಭಿಯಾನ’ದಲ್ಲಿ ‘ಭ್ರಷ್ಟಾಚಾರ ನಿರ್ಮೂಲನದಲ್ಲಿ ಬಳಕೆದಾರರ ಪಾತ್ರ’ ಕುರಿತು ಉಪನ್ಯಾಸವಿತ್ತ ಅವರು ‘ತಳಮಟ್ಟದಿಂದ ರಾಷ್ಟ್ರಮಟ್ಟದ ವರೆಗೆ ಭ್ರಷ್ಟಾಚಾರದಿಂದ ಬಳಕೆದಾರರ ಹಕ್ಕುಗಳು ಮೊಟಕಾಗುತ್ತವೆ, ಬಳಕೆದಾರರು ಅನ್ಯಾಯಕ್ಕೊಳಗಾಗಬೇಕಾಗುತ್ತದೆ’ ಎಂದು ಅನೇಕ ನಿದರ್ಶನಗಳ ಮೂಲಕ ತಮ್ಮ ಮತ್ತು ಇತರರ ಪ್ರಕರಣಗಳನ್ನು ಉದಾಹರಿಸಿ ಮಾತನಾಡಿದರು.

ಭ್ರಷ್ಟಾಚಾರ ವಿರೋಧ ಜಾಗೃತ ದಳದ ಗೌರವಾಧ್ಯಕ್ಷ, ಬಳಕೆದಾರರ ಜಾಗೃತಿ ವೇದಿಕೆಯ ಅಧ್ಯಕ್ಷ ಯು. ಪದ್ಮನಾಭ ಶೆಟ್ಟಿ ನಿಡ್ಡೋಡಿ ಅವರು ಅಧ್ಯಕ್ಷತೆ ವಹಿಸಿದ್ದರು.

ಸಿವಿಲ್ ಎಂಜಿನಿಯರ್ ಎಂ. ರಾಮಚಂದ್ರ ಆಳ್ವ ಸಹಿತ ಅತಿಥಿಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಸಿವಿಲ್ ಎಂಜಿನಿಯರ್ ಎಂ. ಸುರೇಂದ್ರ ಪ್ರಸಾದ್ ಅವರು ’ಟೌನ್ ಪ್ಲಾನಿಂಗ್ ಮತ್ತು ಬಿಲ್ಡಿಂಗ್ ಬೈ-ಲಾ’ ಕುರಿತು, ಡಾ. ಎಂ. ಕೆ. ಗರ್ಡಾಡಿ ಅವರು ‘ನಗರ ನೈರ್ಮಲ್ಯ ಮತ್ತು ಆರೋಗ್ಯ’ ಕುರಿತು ಹಾಗೂ ಭಾರತೀಯ ಮಜ್ದೂರ್ ಸಂಘದ ಮಾಜಿ ಅಧ್ಯಕ್ಷ ಡಿ. ಬಾಲಕೃಷ್ಣ ಅವರು ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕರಿಗೆ ಸಿಗುತ್ತಿರುವ ಪ್ರಯೋಜನಗಳು’ ಕುರಿತು ಮಾಹಿತಿ ನೀಡಿದರು.

ಕಲೆಯೂ ಭ್ರಷ್ಟಾಚಾರ ವಿರೋಧಿಯಾಗಿದೆ: ಯಕ್ಷಗಾನ ಕವಿ, ಪ್ರಸಂಗಕರ್ತ, ಛಾಂದಸ ಗಣೇಶ್ ಕೊಲೆಕಾಡಿ ಅವರನ್ನು ಸೇವಾದಳದ ವತಿಯಿಂದ ಗೌರವಧನ ಸಹಿತ ಸಮ್ಮಾನಿಸಲಾಯಿತು. ‘ಕಲೆಯ ಆಶಯವೂ ಭ್ರಷ್ಟಾಚಾರ ವಿರೋಧಿಯೇ. ರಾವಣ ಭ್ರಷ್ಟಾಚಾರದ ಪ್ರತೀಕವಾದರೆ ರಾಮ ಅದರ ವಿರುದ್ಧ ಹೋರಾಟ ನಡೆಸಿದಾತ; ಹೀಗೆಯೇ ಯಾವುದೇ ಯಕ್ಷಗಾನದ ಕಥಾನಕಗಳಲ್ಲಿ ಪ್ರತಿನಾಯಕ ಭ್ರಷ್ಟಾಚಾರಿಯೂ ನಾಯಕ ಭ್ರಷ್ಟಾಚಾರದ ವಿರುದ್ಧ ಹೋರಾಡುವವನೂ ಆಗಿ ಚಿತ್ರಿಸಲ್ಪಡುತ್ತಾರೆ. ಒಳ್ಳೆಯ ಜೀವಿಯಾಗಿ ಬದುಕಬೇಕೆಂಬುದೇ ಎಲ್ಲ ಕಲೆಗಳ ಸಾರ, ಸಂದೇಶ’ ಎಂದು ಗಣೇಶ್ ಕೊಲಕಾಡಿ ತಮ್ಮ ಗಿತ್ತ ಸಮ್ಮಾನಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಮೂಡುಬಿದಿರೆ ಬಳಕೆದಾರರ ವೇದಿಕೆಯ ಸಂಚಾಲಕ ಡಾ. ರಮಾನಾಥ್ ಪ್ರಭು, ವಕೀಲ ನಾರಾಯಣ ಕಡಲಕೆರೆ, ಹರೀಶ್ ಉಪಸ್ಥಿತರಿದ್ದರು. ಸೇವಾದಳದ ಅಧ್ಯಕ್ಷ ಹರಿಪ್ರಸಾದ್ ನಾಯಕ್ ಪ್ರಸ್ತಾವನೆಗೈದರು. ಶಿಕ್ಷಕ ಜಗನ್ನಾಥ್ ಸ್ವಾಗತಿಸಿ, ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News