×
Ad

ಬ್ಯಾರಿ ನಿಖಾಃ ಹೆಲ್ಪ್ ಲೈನ್ ವಾರ್ಷಿಕ ಮಾಹಾ ಸಭೆ, ಪ್ರಬಂಧ ಸ್ಪರ್ಧೆ ವಿಜೇತ ಲೇಖಕರಿಗೆ ಸನ್ಮಾನ

Update: 2018-07-01 22:48 IST

ಬಂಟ್ವಾಳ, ಜು. 1: ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ವಾರ್ಷಿಕ ಮಹಾಸಭೆಯು ಜು.1ರಂದು ಸಂಜೆ 4 ಗಂಟೆಗೆ  ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ಆಡಿಟೋರಿಯಮ್ ನಲ್ಲಿ  ನಡೆಯಿತು. 

ಈ ಸಂಧರ್ಭದಲ್ಲಿ ತಂಡದ ವತಿಯಿಂದ ಆಯೋಜಿಸಲಾದ ಪ್ರಭಂಧ ಸ್ಪರ್ಧೆಯಲ್ಲಿ ವಿಜೇತರಾದ ಯುವ ಲೇಖಕರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನ ಗಳಿಸಿದ ಲೇಖಕ ರಹಿಮಾನ್ ಮಿತ್ತೂರು ಅವರಿಗೆ ತಂಡದ ಸ್ಥಾಪಕಾಧ್ಯಕ್ಷ ರಾಶ್ ಬ್ಯಾರಿ ಪ್ರಮಾಣ ಪತ್ರದೊಂದಿಗೆ ಚಿನ್ನದ ನಾಣ್ಯ ಮತ್ತು ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಶರೀಫ್ ಕಡಬ ರಿಗೆ ತಂಡದ ಉಪಾಧ್ಯಕ್ಷ ವಹಾಬ್ ಗೂಡಿನಬಳಿ ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ರಾಶ್ ಬ್ಯಾರಿ "ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜವು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಲಿಪಿಯ ಮೂಲಕ ಮುಖ್ಯವಾಹಿನಿಗೆ ತಂದು ಬಗೆಹರಿಸುವಲ್ಲಿ ಅಥವಾ ಇತ್ಯರ್ಥಗೊಳಿಸುವಲ್ಲಿ ಲೇಖಕರ ಪಾತ್ರ ಅಪಾರ. ಯಾವುದೇ ಒಂದು ಹೋರಾಟಕ್ಕೂ ಲೇಖನಿಯಿಂದ ಮುನ್ನುಡಿ ಹಾಡಲು ಸಾಧ್ಯ. ಈ ನಿಟ್ಟಿನಲ್ಲಿ ಅಂತರ್ಜಾಲದ ಮೂಲಕ ಸಕ್ರಿಯವಾಗಿ ತಮ್ಮ ಲೇಖನಗಳನ್ನು ಮಂಡಿಸುತ್ತಿರುವ ಯುವ ಲೇಖಕರನ್ನು ಪ್ರೋತ್ಸಾಹಿಸಿ ಓದುಗರಿಗೆ ಪರಿಚಯಿಸುವ ಉದ್ದೇಶದಿಂದ ಬ್ಯಾರಿ ನಿಖಾಃ ಆರ್ಟಿಕಲ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು" ಎಂದರು.

ಸಮಾಜ ಸೇವೆಯಲ್ಲಿ ಉತ್ತಮವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ತಂಡದ ಏಳಿಗೆಗಾಗಿ ಶ್ರಮಿಸಿದ  ಶರೀಫ್ ಝೈನಿ ಹಾಗೂ ಸುಹೈಲ್ ತೊಕ್ಕೊಟ್ಟು ಇವರಿಗೆ ತಂಡದ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಶರೀಫ್ ಝೈನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತಂಡದ ಕಾರ್ಯದರ್ಶಿಗಳಾದ ಮಜೀದ್ ಬಿಕರ್ನಕಟ್ಟೆ , ಆಶಿಕ್ ಕುಕ್ಕಾಜೆ ಹಾಗೂ ಖಾಲಿದ್ ಮಂಗಳೂರು ಹಾಗೂ ಯುವ ಬರಹಗಾರ ರಹಿಮಾನ್ ಮಠ  ಉಪಸ್ಥಿತಿಯಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News