ಪ್ರಜೆಗಳ ಹಕ್ಕುಗಳಿಗೆ ಧಕ್ಕೆಯಾಗದಂತೆ ಆಡಳಿತ ನಡೆಸುವುದು ಸರಕಾರದ ಹೊಣೆಗಾರಿಕೆ: ಹರ್ಷ ಮಂದರ್

Update: 2018-07-02 11:22 GMT

ಮಂಗಳೂರು, ಜು.2: ಸಂವಿಧಾನದತ್ತವಾಗಿ ಪ್ರಜೆಗಳಿಗೆ ನೀಡಿರುವ ಹಕ್ಕುಗಳಿಗೆ ಧಕ್ಕೆಯಾಗದಂತೆ ಹಾಗೂ ಕಾನೂನುಬದ್ಧವಾಗಿ ಜನರು ನಡೆದುಕೊಳ್ಳುವಂತೆ ಆಡಳಿತ ನಡೆಸುವ ಹೊಣೆಗಾರಿಕೆ ಸರ್ಕಾರದ್ದಾಗಿರಬೇಕು ಎಂದು ನಿವೃತ್ತ ಹಿರಿಯ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಹೇಳಿದರು.

ಕಾರ್‌ವಾನ್ ಇ ಮೊಹಬ್ಬತ್ ಆಂದೋಲನದ ಅಂಗವಾಗಿ ನಗರಕ್ಕೆ ಆಗಮಿಸಿರುವ ಅವರು ಇಂದು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದೇಶದಲ್ಲಿ ಕಳೆದ 10 ದಿನಗಳಲ್ಲಿ 20 ಕಡೆಗಳಲ್ಲಿ ನಾಗರಿಕ ಕಾನೂನುಗಳನ್ನು ಉಲ್ಲಂಘಿಸಿ ಸಾಮೂಹಿಕವಾಗಿ ದೌರ್ಜನ್ಯ ನಡೆದಿದೆ. ಈ ಪ್ರಕರಣಗಳಲ್ಲಿ ಮುಖ್ಯವಾಗಿ ದಲಿತರು, ಮಹಿಳೆಯರು, ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ಸಾಮೂಹಿಕ ಹಲ್ಲೆ, ದೌರ್ಜನ್ಯ, ಕೊಲೆಯೂ ನಡೆದಿದೆ. ಸಂವಿಧಾನದತ್ತವಾದ ಪ್ರಜೆಗಳ ಹಕ್ಕುಗಳನ್ನು ರಕ್ಷಣೆ ಮಾಡಬೇಕಾದ ಪೊಲೀಸರ ಸಮ್ಮುಖದಲ್ಲಿ ಈ ರೀತಿಯ ಹಲ್ಲೆ ನಡೆಯುತ್ತಿರುವುದು, ಅದನ್ನು ಕೆಲವರು ವೀಡಿಯೊ ಮಾಡಿ ಪ್ರಸಾರ ಮಾಡುತ್ತಿರುವುದು ಕಳವಳಕಾರಿಯಾಗಿದೆ. ಈ ಸಂದರ್ಭದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ತಾರತಮ್ಯ ಮಾಡದೆ ಪ್ರಜೆಗಳ ಹಕ್ಕುಗಳನ್ನು ರಕ್ಷಣೆ ಮಾಡಬೇಕಾಗಿದೆ ಎಂದು ಅವರು ನುಡಿದರು.

ಕರಾವಳಿಯಲ್ಲಿ ಪೊಲೀಸರ ಸಮ್ಮುಖದಲ್ಲಿ ಈ ರೀತಿಯ ಗುಂಪು ದೌರ್ಜನ್ಯದಿಂದ ಹತ್ಯೆಯಾದ ಹುಸೇನಬ್ಬರ ಕುಟುಂಬಕ್ಕೆ ಕಾನೂನಿನ ಮೂಲಕ ರಕ್ಷಣೆ ನೀಡುವುದು ಮತ್ತು ನ್ಯಾಯ ಒದಗಿಸಿಕೊಡುವುದು ಸರಕಾರದ ಹೊಣೆಗಾರಿಕೆಯಾಗಿದೆ ಎಂದರು.

ಸಂತ್ರಸ್ತರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಮತ್ತು ಸರಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಕಾರವಾನ್ ಇ ಮೊಹಬ್ಬತ್ ಆಂದೋಲನ ನಡೆಯುತ್ತಿದೆ ಎಂದು ಹರ್ಷ ಮಂದರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರವಾನ್ ಇ ಮೊಹಬ್ಬತ್ ಆಂದೋಲನದ ಸಂಘಟಕರಾದ ಜಾಬ್ ದಯಾಳ್, ನತಾಶಾ ಬದ್ವಾರ್, ವಿದ್ಯಾ ದಿನಕರ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News