×
Ad

ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದಲ್ಲಿ ನಿರ್ಲಕ್ಷ್ಯ: ಜು.15ರೊಳಗೆ ಪೂರ್ಣಗೊಳಿಸಲು ಗುತ್ತಿಗೆ ಸಂಸ್ಥೆಗೆ ಸೂಚನೆ

Update: 2018-07-02 17:11 IST

ಮಂಗಳೂರು, ಜು.2: ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದ ಗುತ್ತಿಗೆ ವಹಿಸಿಕೊಂಡ ಕೆಆರ್‌ಐಡಿಎಲ್ ಮತ್ತು ಪಾನ್ ಏಸ್ಯಾ ಕಂಪೆನಿಯು ಕಾಮಗಾರಿ ಪೂರ್ಣಗೊಳಿಸುವಲ್ಲಿ ನಿರ್ಲಕ್ಷ್ಯ ತಾಳಿದೆ ಎಂಬ ಆರೋಪ ಸೋಮವಾರ ದ.ಕ. ಜಿಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮಾ.27ರಂದು ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಅರ್ಧದಲ್ಲೇ ಸ್ಥಗಿತಗೊಂಡ 11ನೆ ಸಾಮಾನ್ಯ ಸಭೆಯ ಮುಂದುವರಿದ ಸಭೆಯಲ್ಲಿ ಮಾತನಾಡಿದ ಸದಸ್ಯೆ ಮಂಜುಳಾ ಮಾಧವೆ ಮಾವೆ, ಜಿಲ್ಲೆಯ ಬಹುತೇಕ ಕುಡಿಯುವ ನೀರಿನ ಶುದ್ಧ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗುತ್ತಿಗೆ ವಹಿಸಿಕೊಂಡ ಕಂಪೆನಿಯು ಅಪೂರ್ಣ ಕಾಮಗಾರಿ ಮಾಡಿ ತರಾತುರಿಯಲ್ಲಿ ಗ್ರಾಪಂ ಆಡಳಿತಕ್ಕೆ ಹಸ್ತಾಂತರಿಸಿದೆ. ಅಲ್ಲದೆ, ಘಟಕವನ್ನು ಮುಂದೆ ಯಾರು ನಿರ್ವಹಿಸುವುದು ಎಂಬುದರ ಬಗ್ಗೆಯೂ ಸ್ಪಷ್ಟ ನಿಯಮಾವಳಿ ತಂದಿಲ್ಲ ಎಂದರು.

ಇದಕ್ಕೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಧ್ವನಿಗೂಡಿಸಿ ಈ ವಿಚಾರವನ್ನು ಸಭೆಯು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ 227 ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ನಿರ್ಧರಿಸಲಾಗಿತ್ತು. ಬಳಿಕ 77 ಘಟಕಗಳ ನಿರ್ಮಾಣ ಪ್ರಸ್ತಾವವನ್ನು ಕೈ ಬಿಡಲಾಗಿತ್ತು. ಹಾಗಾಗಿ 150 ಘಟಕಗಳನ್ನು ಗುತ್ತಿಗೆ ವಹಿಸಿದ ಸಂಸ್ಥೆಯು ನಿರ್ಮಿಸಿದೆ. ಆ ಪೈಕಿ 73 ಚಾಲ್ತಿಯಲ್ಲಿದೆ ಎಂದು ಜಿಪಂ ಸಿಇಒ ಡಾ.ಎಂ.ಆರ್.ರವಿ ಸಭೆಗೆ ಮಾಹಿತಿ ನೀಡಿದರಲ್ಲದೆ, ಈ ಬಗ್ಗೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಜು.15ರೊಳಗೆ ದುರಸ್ತಿ ಕೆಲಸ ಪೂರ್ಣಗೊಳಿಸಲು ಸೂಚಿಸಲಾಗಿದೆ. ಅದರೊಳಗೆ ಆಗದಿದ್ದರೆ ತಪ್ಪಿತಸ್ಥರ ತಲೆದಂಡವಾಗಲಿದೆ ಎಂದರು.

ಸದನ ಸಮಿತಿಯ ವರದಿ ಬಂದ ಬಳಿಕ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಳಿಸಿದರು.

*ಗ್ರಾಪಂ ಸದಸ್ಯರಿಂದಲೇ ಅಡ್ಡಿ:

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ ಬಹುತೇಕ ಇಕ್ಕೆಲಗಳಲ್ಲಿ ಕಸ, ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸುವವರ ಪತ್ತೆಗೆ ಸ್ಥಳೀಯ ಗ್ರಾಪಂಗಳು ಸಿಸಿಟಿವಿ ಕ್ಯಾಮರಾ ಅಳವಡಿಸಿದರೂ ಪ್ರಯೋಜನವಾಗಿಲ್ಲ ಎಂದು ಸದಸ್ಯರು ಸಭೆಯ ಗಮನ ಸೆಳೆದರು.

ಹಳೆಯಂಗಡಿಯ ಗ್ರಾಮದ ರಾ.ಹೆ.ಯ ಇಕ್ಕೆಡೆಗಳಲ್ಲಿ ಕಸ ಎಸೆಯುತ್ತಿದ್ದ ಬಗ್ಗೆ ಸ್ಥಳೀಯ ಗ್ರಾಪಂಗೆ ದೂರು ನೀಡಿದರೂ ಪ್ರಯೋಜನಾಗಿಲ್ಲ ಎಂದು ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಗಳೂರು ತಾಪಂ ಇಒ, ಕೆಲವು ಗ್ರಾಪಂ ಸದಸ್ಯರೇ ಕಸ ಎಸೆಯುವರ ಮೇಲೆ ಕ್ರಮ ಕೈಗೊಳ್ಳದಂತೆ ತಡೆಯೊಡ್ಡುವ ಮೂಲಕ ಕಸ ಎಸೆಯಲು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಭೆಯು ಯಾವ್ಯಾವ ಗ್ರಾಪಂ ಸದಸ್ಯರು ಅಡ್ಡಿಪಡಿಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತು.

ಈ ಮಧ್ಯೆ ವಿಷಯ ಪ್ರಸ್ತಾಪಿಸಿದ ಜಿಪಂ ಸಿಇಒ ಡಾ.ಎಂ.ಆರ್.ರವಿ, ರಾಷ್ಟ್ರೀಯ ಹೆದ್ದಾರಿಯಲ್ಲಿ 51 ಗ್ರಾಪಂಗಳು ಹಾದುಹೋಗುತ್ತದೆ. ಇಲ್ಲಿ ಕಸ, ತ್ಯಾಜ ಎಸೆಯುವವರಿಗೆ ದಂಡ ವಿಧಿಸಲಾಗಿದೆ, ವಾಹನಗಳ ನೋಂದಣಿ ರದ್ದತಿಗೆ ಸೂಚಿಸಲಾಗಿದೆ, ಪ್ರಕರಣ ದಾಖಲಿಸಲು ಸಹಾಯಕ ಆಯುಕ್ತರಿಗೆ ಆದೇಶಿಸಲಾಗಿದೆ. 26 ಗ್ರಾಪಂಗೆ ನೋಟಿಸ್ ನೀಡಿ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ 11 ಕ್ಲಸ್ಟರ್‌ಗಳನ್ನು ರಚಿಸಿ ವಿಲೇವಾರಿ ಆಗದಿರುವ ತ್ಯಾಜ್ಯಗಳನ್ನು ಇಂಧನರಹಿತವಾಗಿ ವೈಜ್ಞಾನಿಕ ಮಾದರಿಯಲ್ಲಿ ‘ಸ್ವಚ್ಛಾಸ್ತ್ರ’ ಮಾಡಲಾಗುವುದು. ಸದ್ಯ ಸುಬ್ರಹ್ಮಣ್ಯ ಗ್ರಾಪಂ ವ್ಯಾಪ್ತಿಯಲ್ಲಿ ಈ ಘಟಕವನ್ನು ಅಳವಡಿಸಲಾಗುವುದು ಎಂದರು.

*187 ಶಾಲಾ ಕಟ್ಟಡಗಳ ನೆಲಸಮಕ್ಕೆ ವರದಿ:

ಜಿಲ್ಲೆಯ 187 ಶಾಲಾ ಕಟ್ಟಡಗಳು ಕುಸಿಯುವ ಹಂತ ತಲುಪಿವೆ. ಅವುಗಳ ದುರಸ್ತಿಯ ಬದಲು ನೆಲಸಮ ಮಾಡುವುದು ಅನಿವಾರ್ಯ. ಅಲ್ಲದೆ ಕೆಡವಿದ ಶಾಲಾ ಕಟ್ಟಡಗಳಲ್ಲಿ 276 ಕೊಠಡಿಗಳನ್ನು ನಿರ್ಮಿಸಬೇಕಿದೆ. ಈ ಬಗ್ಗೆ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದ ಡಿಡಿಪಿಐ, ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಪರಿಶೀಲನೆಗೊಳಪಡಿಸಿ ತಾಂತ್ರಿಕ ವರದಿಯನ್ನು ತಯಾರಿಸಲು ಸೂಚನೆ ನೀಡಲಾಗಿದೆ. ಅದರಂತೆ ಕ್ರಮ ವಹಿಸಲಾಗುವುದು ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯರು ಶಾಲಾ ಕಟ್ಟಡದಂತೆ ಮಣ್ಣಿನ ಗೋಡೆಯಲ್ಲಿ ನಿರ್ಮಿಸಲಾದ ಶಾಲಾವರಣದ ಶೌಚಾಲಯ ಕೂಡಾ ಇದೆ. ಇದನ್ನೂ ಕೆಡವಿ ಹೊಸತನ್ನು ನಿರ್ಮಿಸಬೇಕಿದೆ. ಹಾಗಾಗಿ ಜಿಲ್ಲೆಯ ಯಾವ್ಯಾವ ಶಾಲೆಗಳ ಶೌಚಾಲಯವು ಶಿಥಿಲಾವಸ್ಥೆಯಲ್ಲಿದೆ ಎಂಬುದರ ಪಟ್ಟ ತಯಾರಿಸಲು ಒತ್ತಾಯಿಸಿದರು.

*ಜಿಲ್ಲೆಯ ಬಹುತೇಕ ಸರಕಾರಿ ಶಾಲೆಗಳ ಆರ್‌ಟಿಸಿ ಸರಿ ಇಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನ ಸೆಳದರೂ ಪ್ರಯೋಜನವಾಗಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಂಗಳೊಳಗೆ ಎಲ್ಲಾ ಸರಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗೆ ಸೂಕ್ತ ವರದಿ ಸಲ್ಲಿಸಲು ಡಿಡಿಪಿಐಗೆ ಸೂಚಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಜನಾರ್ದನ ಗೌಡ, ಯು.ಪಿ.ಇಬ್ರಾಹೀಂ, ಅನಿತಾ ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು.


*ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿ
ಸೋಮವಾರ ನಡೆದ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದ ವಿದ್ಯಮಾನವೂ ನಡೆಯಿತು.

ಚುನಾವಣೆಯ ಸಂದರ್ಭ ತೀವ್ರ ಗೊಂದಲ ಮತ್ತು ಅಪಪ್ರಚಾರಕ್ಕೆ ಕಾರಣವಾದ ಕಲ್ಲಡ್ಕದ ಶ್ರೀರಾಮ ಪ್ರೌಢಶಾಲೆ ಹಾಗೂ ಪುಣಚದ ಶ್ರೀದೇವಿ ಪ್ರೌಢಶಾಲೆಯ ಸರಕಾರದ ಅಕ್ಷರದಾಸೋಹ ಯೋಜನೆಯಡಿ ಬಿಸಿಯೂಟ ಪೂರೈಸಲಾಗುತ್ತಿದೆ. ವಿವಾದ ಬಗೆಹರಿಯಲು ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಯತ್ನ ಶ್ಲಾಘನೀಯ ಎಂದು ಸದಸ್ಯೆ ಮಮತಾ ಗಟ್ಟಿ ಹೇಳಿದರು. ಇದಕ್ಕೆ ಸದಸ್ಯರಾದ ಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್ ಧ್ವನಿಗೂಡಿಸಿದರು.

ತಕ್ಷಣ ಮಧ್ಯಪ್ರವೇಶಿಸಿದ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಇದಕ್ಕೆ ಸ್ಥಳೀಯ ಶಾಸಕ ರಾಜೇಶ್ ನಾಕ್‌ರ ಶ್ರಮವೂ ಇದೆ ಎಂದರು. ಅವರು ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹಾಕಿದ ಕಾರಣ ವಿವಾದ ಬಗೆಹರಿಯಿತು ಎಂದರು. ಇದು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು.


ಬಿಜೆಪಿ ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ ಸಭೆಯ ಕಾರ್ಯಸೂಚಿಯು ಸ್ಷಷ್ಟತೆಯಿಂದ ಕೂಡಿಲ್ಲ. ಒಂದಲ್ಲೊಂದು ತಪ್ಪು ನುಸುಳುತ್ತಲೇ ಇದೆ. ಅಲ್ಲದೆ, ಪ್ರತೀ ಸಭೆಯಲ್ಲೂ ಪುನರಾವರ್ತನೆಗೊಳ್ಳುತ್ತಿವೆ. ಇದಕ್ಕೆ ಅಂತ್ಯ ಹಾಕುವುದು ಯಾವಾಗ? ಎಂದು ಪ್ರಶ್ನಿಸಿದರು. ‘ಈ ಬಗ್ಗೆ ಅಧ್ಯಕ್ಷರೇ ಉತ್ತರಿಸಲಿ, ಅವರು ಸಾಮಾನ್ಯ ಸಭೆಗೆ ಮುನ್ನ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಮಮತಾ ಗಟ್ಟಿ ಹೇಳಿದರು. ಇದರಿಂದ ಸಿಟ್ಟಾದ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ‘ನೀವು ನಿಮ್ಮ ಕ್ಷೇತ್ರ ನೋಡಿ, ಬೇರೆಯವರ ವಿಚಾರ ನಿಮಗೆ ಬೇಡ. ನನಗೆ ಹೇಳಲು ನೀವು ಯಾರು? ಕೂತ್ಕೊಳ್ಳಿ’ ಎಂದು ಅಬ್ಬರಿಸಿದರು.

‘ನೀವು ಹೇಳಿದಾಗ ಕೂತ್ಕೊಳ್ಳಲು ನಾನು ನಿಮ್ಮ ಜನ ಅಲ್ಲ’ ಎಂದು ಮಮತಾ ಗಟ್ಟಿ ತಿರುಗೇಟು ನೀಡಿದರು. ‘ಹಾಗಿದ್ದರೆ, ಹಾಗೇ ಹೇಳಲು ನೀವು ನನ್ನ ಜನನಾ?’ ಎಂದು ಪ್ರಶ್ನಿಸಿದ ಮೀನಾಕ್ಷಿ ಶಾಂತಿಗೋಡು, ‘ಎಲ್ಲದಕ್ಕೂ ನೀವು ಯಾಕೆ ಬಾಯಿ ಹಾಕುವುದು?ಎಷ್ಟು ಬೇಕೋ ಅಷ್ಟು ಮಾತನಾಡಿ’ ಎಂದರು. ಅಷ್ಟರಲ್ಲಿ ಮಮತಾ ಗಟ್ಟಿ ಪರ ನಿಂತ ಕಾಂಗ್ರೆಸ್ ಸದಸ್ಯರು ‘ಕಾರ್ಯಸೂಚಿ ಸರಿಯಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರೇ ಗೂಬೆ ಕೂರಿಸುತ್ತಿದ್ದಾರೆ ಎಂಬುದು ನಿಮ್ಮ ಗಮನದಲ್ಲಿರಲಿ’ ಎಂದಾಗ ಆಡಳಿತ ಪಕ್ಷದ ಸದಸ್ಯರು ಅದಕ್ಕೆ ಆಕ್ಷೇಪ ವ್ಯಕ್ತಪಡಿದರು. ವಾಗ್ವಾದ ಬಿರುಸು ಪಡೆಯುತ್ತಿದ್ದಂತೆಯೇ ಕೆಲವು ಸದಸ್ಯರು ‘ಊಟಕ್ಕೆ ಹೊತ್ತಾಯ್ತು... ಊಟ ಮಾಡಿ ಮತ್ತೆ ಮಾತು ಮುಂದುವರಿಸೋಣ’ ಎನ್ನುತ್ತಲೇ ಚರ್ಚೆ ತಣ್ಣಗಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News