ಮನೆಯಂಗಳದಲ್ಲಿ ಮಹಿಳಾ ಜಾಗೃತಿ
ಬಂಟ್ವಾಳ, ಜು. 2: ಅಶಕ್ತ, ಅಸಹಾಯಕ ಮಹಿಳೆಯರನ್ನು ಒಗ್ಗೂಡಿಸಿ ಸ್ವಶಕ್ತಿಯ ಅರಿವು ಮೂಡಿಸಿ, ಸ್ವಸಹಾಯ ಮನೋಭಾವ ಬೆಳೆಸುವ, ಸ್ವಯಂ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಯಲ್ಲಿ ಪಾಲುದಾರರಾಗುವಂತೆ ಪ್ರೇರೆಪಿಸುವ ಉದ್ದೇಶದಿಂದ ಅರಳ ಗ್ರಾಮದ ಕುಟ್ಟಿಕಳದ ತುಂಗಮ್ಮ ಭೋಜ ಪೂಜಾರಿಯ ಮನೆಯಂಗಳದಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಜನ ಶಿಕ್ಷಣ ಟ್ರಸ್ಟ್, ದಿ ಹಂಗರ್ ಪ್ರೊಜೆಕ್ಟ್ ಸುಗ್ರಾಮ ಸಂಘದ ಸಹಭಾಗಿತ್ವದಲ್ಲಿ ಗ್ರಾಪಂ ಅಧ್ಯಕ್ಷೆ ತುಂಗಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಜಾಗೃತಿ ವೇದಿಕೆ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ವರ್ಗದ ಮಹಿಳೆಯರು ತಮ್ಮ ಕುಟುಂಬದ ಸ್ಥಿತಿಗತಿಗಳ ಕುರಿತು ಮುಕ್ತವಾಗಿ ಮಾತನಾಡಿದರು.
ಜೀವನೋಪಾಯಕ್ಕೆ ಕೃ ಕೂಲಿಯನ್ನೇ ನಂಬಿಕೊಂಡಿರುವ 12 ಕುಟುಂಬಗಳು ಇನ್ನೂ ಉದ್ಯೋಗ ಚೀಟಿ ಹೊಂದಿಲ್ಲದಿರುವುದು. ಹಲವಾರು ವರ್ಷಗಳಿಂದ ಖಾಸಗೀ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಜೀವನ ಮಾಡುತ್ತಿರುವ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ಸಿಗದೆ ಇರುವುದು, ಸುಮಾರು 25ಕ್ಕೂ ಹೆಚ್ಚು ಕುಟುಂಬಗಳು ವಾಸವಿರುವ ಅಂಗಡಿಗುತ್ತು ಪೋರ್ಕಲ ಪ್ರದೇಶಕ್ಕೆ ಸಂಪರ್ಕ ರಸ್ತೆ ಇಲ್ಲದೆ ಎದುರಿಸುತ್ತಿರುವ ಸಂಕಷ್ಟಗಳ ಕಹಿ ಅನುಭವಗಳನ್ನು ನೊಂದ ಮಹಿಳೆಯರು ಹಂಚಿಕೊಂಡರು.
ಸಂಕಷ್ಟದಲ್ಲಿರುವ ಜನರು ಸಂಘಟಿತರಾಗಿ ವಾರ್ಡ್, ಗ್ರಾಮ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವೈಯಕ್ತಿಕ ಹಾಗೂ ಸಮುದಾಯದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು.
ಕೃಷಿ ಕೂಲಿ ಕೆಲಸದಲ್ಲಿ ತೊಡಗಿರುವ ಎಲ್ಲಾ ಕುಟುಂಬಗಳಿಗೆ ಉದ್ಯೋಗ ಚೀಟಿಗಳನ್ನು ಮಾಡಿಸಿ ಉದ್ಯೋಗ ಖಾತರಿ ಯೋಜನೆಯಡಿ ಹಣ್ಣಿನ ಗಿಡಗಳನ್ನು ಬೆಳೆಸುವ ಪೌಷ್ಠಿಕ ತೋಟಗಳನ್ನು ಬೆಳೆಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಯಿತು.
ಮಹಾತ್ಮ ಗಾಂಧಿ ನರೇಗಾ ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ ಸಂವಾದ ನಡೆಸಿದರು. ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕಿಯರಾದ ಪದ್ಮಿನಿ, ಚಂಚ ಪಾಲ್ಗೊಂಡಿದ್ದರು.