ಕ್ಷಯ ರೋಗ ತಡೆ ಜಾಗೃತಿ ಅಭಿಯಾನ ಆರಂಭ-ಡಾ.ರಾಮಕೃಷ್ಣ ರಾವ್
ಮಂಗಳೂರು, ಜು. 2: ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಕುರಿತ ಆಂದೋಲನವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು. 2ರಿಂದ ಜು.13ರವರೆಗೆ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಆರಂಭಿಕ ಕ್ಷಯ(ಟಿಬಿ) ಪ್ರಕರಣಗಳನ್ನು ಪತ್ತೆಹಚ್ಚುವ ಪ್ರಾಥಮಿಕ ಉದ್ದೇಶದೊಂದಿಗೆ ಸಕ್ರಿಯ ಪ್ರಕರಣಗಳನ್ನು ಕಂಡುಹಿಡಿಯುವುದು ಮತ್ತು ಚಿಕಿತ್ಸೆ ಆರಂಭಿಸಿವುದು ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದರು.
ಜಿಲ್ಲೆಯಲ್ಲಿ ಸುಮಾರು 500 ತಂಡಗಳ ಮೂಲಕ 1,116 ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಂದೋಲನದ ಮೂಲಕ ಜಾಗೃತಿ ಮೂಡಿಸಲಿದ್ದಾರೆ. ಅಲ್ಲದೆ ಈಗಾಗಲೇ ಗುರುತಿಸಿರುವ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎರಡು ವಾರಗಳಿಗೂ ಮೇಲ್ಪಟ್ಟು ಕೆಮ್ಮು, ತೂಕ ಕಡಿಮೆಯಾಗುವುದು, ಎದೆ ನೋವು ಹಸಿವಾಗದಿರುವುದು, ಸಂಜೆ ವೇಳೆ ಜ್ವರ, ಕದಲ್ಲಿ ರಕ್ತ ಬೀಳುವುದು ಇವು ಕ್ಷಯ ರೋಗದ ಲಕ್ಷಣಗಳಾಗಿರುತ್ತವೆ. ಆದ್ದರಿಂದ ಸಾರ್ವಜನಿಕರು ಇಂತಹ ಸಂದರ್ಭಗಳಲ್ಲಿ ನಿರ್ಲಕ್ಷ್ಯ ವಹಿಸದೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ರಾಮಕೃಷ್ಣರಾವ್ ಹೇಳಿದರು.
ಮನೆ ಮನೆ ಭೇಟಿ ಮೂಲಕ ಜಿಲ್ಲೆಯಲ್ಲಿ ಪತ್ತೆ ಕಾರ್ಯ ನಡೆಯಲಿದೆ.ರೋಗ ಲಕ್ಷಣಗಳನ್ನು ಹೊಂದಿದ ವರಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಮಾಡಲಾಗುವುದು. ಮನೆಗೆ ಬರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರು ಸಂಪೂರ್ಣ ಮಾಹಿತಿ ನೀಡಿ ಸಹಕರಿಸಬೇಕು ಎಂದು ಡಾ. ರಾಮಕೃಷ್ಣ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಡಾ.ಬದ್ರುದ್ದೀನ್ ಉಪಸ್ಥಿತರಿದ್ದರು.