ಜಾತಿ ವಿವಾದ: ಟ್ವಿಟರ್‌ನಲ್ಲಿ ಟೀಕೆಗೆ ಗುರಿಯಾದ ಕಮಲ್ ಹಾಸನ್

Update: 2018-07-02 16:37 GMT

ಚೆನ್ನೈ, ಜು.2: ಜಾತಿ ಪದ್ಧತಿ ವಿರುದ್ಧ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ಟ್ವಿಟರ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಸುಧಾರಣೆ ಎಂಬುದು ಮೊದಲು ನಮ್ಮ ಮನೆಯಿಂದಲೇ ಆರಂಭವಾಗಬೇಕೆಂಬ ಸಲಹೆಗಳು ಟ್ವಿಟರ್‌ನಲ್ಲಿ ಕಮಲ್ ಹಾಸನ್‌ಗೆ ಬಂದಿವೆ.

“ನಾನು ನನ್ನ ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸುವಾಗ ಅರ್ಜಿಯಲ್ಲಿ ಜಾತಿ ಮತ್ತು ಧರ್ಮವನ್ನು ಉಲ್ಲೇಖಿಸಿರಲಿಲ್ಲ” ಎಂದು ಈ ಕಮಲ್ ಇತ್ತೀಚೆಗೆ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟಿಗರೊಬ್ಬರು, ಕಮಲ್ ಪುತ್ರಿ ಶೃತಿ ಹಾಸನ್ ಈ ಹಿಂದೆ ಮಾಧ್ಯಮಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ತಾನು ಐಯ್ಯಂಗಾರ್ ಎಂದು ಹೇಳಿಕೊಂಡಿರುವ ವಿಡಿಯೊ ತುಣುಕನ್ನು ಅಪ್‌ಲೋಡ್ ಮಾಡಿದ್ದರು. ಜೊತೆಗೆ, “ಕಮಲ್ ಹಾಸನ್ ಅವರೇ ನೀವು ನಿಮ್ಮ ಮಕ್ಕಳ ಶಾಲಾ ದಾಖಲಾತಿ ಅರ್ಜಿಯಲ್ಲಿ ಜಾತಿ ಬರೆಯದಿದ್ದರೂ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕುವ ನಿಮ್ಮ ಪ್ರಯತ್ನ ವಿಫಲವಾಗಿದೆ. ಅರ್ಜಿಯಲ್ಲಿ ಜಾತಿ ಬರೆಯದೆ ಇದ್ದ ಮಾತ್ರಕ್ಕೆ ಪರಿಹಾರವಾಗುವುದಿಲ್ಲ, ಮಕ್ಕಳು ಅವರ ಜಾತಿ ಯಾವುದೆಂದು ತಿಳಿಯದ ರೀತಿಯಲ್ಲಿ ಅವರನ್ನು ಬೆಳೆಸಿ” ಎಂದು ಸಲಹೆ ನೀಡಿದ್ದರು. ಬ್ರಾಹ್ಮಣರು ಧರಿಸುವ ಜನಿವಾರ ಬಗ್ಗೆಯೂ ವಿರೋಧ ವ್ಯಕ್ತಪಡಿಸಿದ್ದ ಕಮಲ್, ಈ ದಾರವು ನನ್ನ ಮೇಲೆ ಬಹಳ ಪ್ರಭಾವ ಬೀರುತ್ತಿತ್ತು. ಆ ಕಾರಣಕ್ಕೆ ಅದನ್ನು ತೆಗೆದು ಹಾಕಿದೆ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟ್ಟರ್ ಬಳಕೆದಾರರೊಬ್ಬರು, “ನಿಮ್ಮ ಮಗಳು ಶೃತಿ, ನನ್ನ ತಂದೆ, ನಾನು ಮತ್ತು ನನ್ನ ತಂಗಿ ಹೆಮ್ಮೆಯ ಐಯ್ಯಂಗಾರ್‌ಗಳು ಎಂದು ಹೇಳಿಕೊಂಡಿದ್ದಾರೆ. ಜನಿವಾರವನ್ನು ತೆಗೆದು ಹಾಕುವುದು ಅಥವಾ ಜಾತಿ ಪ್ರಮಾಣಪತ್ರವನ್ನು ಹರಿದು ಹಾಕುವುದರಿಂದ ಜಾತಿ ವ್ಯವಸ್ಥೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ. “ನಾನು ನನ್ನ ಮಕ್ಕಳ ಶಾಲಾ ದಾಖಲಾತಿ ಅರ್ಜಿಯಲ್ಲಿ ಜಾತಿ ಮತ್ತು ಧರ್ಮವನ್ನು ಉಲ್ಲೇಖಿಸಿಲ್ಲ. ಜಾತಿಯನ್ನು ಮುಂದಿನ ಪೀಳಿಗೆಗೆ ತಲುಪದಂತೆ ಮಾಡಲು ಇರುವ ದಾರಿ ಅದೊಂದೇ. ಪ್ರತಿಯೊಬ್ಬ ವ್ಯಕ್ತಿ ಕೂಡಾ ಈ ನಿಟ್ಟಿನಲ್ಲಿ ಅಭಿವೃದ್ಧಿಗೆ ಕೈಜೋಡಿಸಬೇಕು. ಕೇರಳ ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿದೆ” ಎಂದು ಕಮಲ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News