ಬಿ.ಸಿ.ರೋಡ್ ಟಿಸಿ ಪಾಯಿಂಟ್ ಧ್ವಂಸ: ಆರೋಪ; ದೂರು ದಾಖಲು
ಬಂಟ್ವಾಳ, ಜು.2: ಬಿ.ಸಿ.ರೋಡ್ ಸರ್ವಿಸ್ ಬಸ್‌ನಿಲ್ದಾಣದಲ್ಲಿದ್ದ ಕೆಎಸ್ಸಾರ್ಟಿಸಿ ಸಂಸ್ಥೆಯ ಟಿಸಿ ಪಾಯಿಂಟ್ ಕಟ್ಟಡವನ್ನು ಧ್ವಂಸ ಮಾಡಲಾಗಿದೆ ಎಂದು ಆರೋಪಿಸಿ ಕೆಎಸ್ಸಾರ್ಟಿಸಿಯ ಬಿ.ಸಿ.ರೋಡ್ ವಿಭಾಗವು ಸೋಮವಾರ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದೆ.
ಕೆಎಸ್ಸಾರ್ಟಿಸಿ ಬಿ.ಸಿ.ರೋಡ್ ವಿಭಾಗದ ವ್ಯವಸ್ಥಾಪಕರೊಬ್ಬರು ಈ ದೂರು ನೀಡಿದ್ದು, ಸಾರ್ವಜನಿಕ ಕಟ್ಟಡ ಧ್ವಂಸದ ಆರೋಪದಡಿ ಪ್ರಕರಣ ದಾಖಲಾಗಿದೆ.
ಬಿ.ಸಿ.ರೋಡ್ ಸರ್ವಿಸ್ ಬಸ್‌ನಿಲ್ದಾಣದಲ್ಲಿರುವ ಪುರಸಭೆಯ ಕಟ್ಟಡದಲ್ಲಿ ಕೆಎಸ್ಸಾರ್ಟಿಸಿಯ ಬಿ.ಸಿ.ರೋಡ್ ವಿಭಾಗದ ಟಿಸಿ ಪಾಯಿಂಟ್ ಕಚೇರಿ ಕಾರ್ಯಚರಿಸುತ್ತಿತ್ತು. ಅಲ್ಲದೆ, ಪುರಸಭೆಯು ಇದನ್ನು ಕೆಎಸ್ಸಾರ್ಟಿಸಿಗೆ ಬಾಡಿಗೆಗೆ ಒದಗಿಸಲಾಗಿತ್ತು. ಕೆಎಸ್ಸಾರ್ಟಿಸಿ ಸಂಸ್ಥೆಗೆ ಬಿ.ಸಿ.ರೋಡ್‌ನಲ್ಲಿ ಹೊಸ ಬಸ್ ನಿಲ್ದಾಣದ ಡಿಪೊ ನಿರ್ಮಾಣವಾಗಿದ್ದು, ಪುರಸಭೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಈ ಟಿಸಿ ಪಾಯಿಂಟನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗಿದೆ. ಕಳೆದ ಶನಿವಾರ ಈ ಟಿಸಿ ಪಾಯಿಂಟ್‌ನಲ್ಲಿ ಉಳಿದಿದ್ದ ಇನ್ನಿತರ ಸೊತ್ತುಗಳನ್ನು ಖಾಲಿ ಮಾಡಿಲಾಗಿದೆ. ಆದರೆ,ಸೋಮವಾರ ಪುರಭೆಯ ಕಟ್ಟಡ ಕೀಯನ್ನು ಕೆಎಸ್ಸಾರ್ಟಿಸಿ ಹಸ್ತಾಂತರಿಸಿದ್ದು, ಕಟ್ಟಡ ಧ್ವಂಸದ ಬಗ್ಗೆ ಪುರಸಭೆಯು ಮಾಹಿತಿ ನೀಡಿದೆ. ಈ ನಿಟ್ಟಿನಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಕೆಎಸ್ಸಾರ್ಟಿಸಿಯ ಬಿ.ಸಿ.ರೋಡ್ ವಿಭಾಗದ ವ್ಯವಸ್ಥಾಪಕರೊಬ್ಬರು ಮಾಹಿತಿ ನೀಡಿದ್ದಾರೆ.
2002ರಲ್ಲಿ ಬಿ.ಸಿ.ರೋಡಿನ ಸರ್ವಿಸ್ ಬಸ್ ನಿಲ್ದಾಣದಲ್ಲಿ ಸುಮಾರು 1.15 ಲಕ್ಷ ರೂ. ವೆಚ್ಚದಲ್ಲಿ ಈ ಟಿಸಿ ಪಾಯಿಂಟನ್ನು ಪುರಸಭೆಯ ವತಿಯಿಂದ ನಿರ್ಮಿಸಿದ್ದು, ಇದನ್ನು ಕೆಎಸ್ಸಾರ್ಟಿಸಿ ಸಂಸ್ಥೆಗೆ ಬಾಡಿಗೆಗೆ ನೀಡಲಾಗಿತ್ತು. ಆದರೆ, ಪುರಸಭಾ ಅಧ್ಯಕ್ಷರಿಗಾಗಲೀ, ಮುಖ್ಯಾಧಿಕಾರಿಗಳಿಗಲೀ ಯಾವುದೇ ಮಾಹಿತಿ ನೀಡದೇ ಶನಿವಾರ ರಾತ್ರಿ ಜೆಸಿಬಿ ಬಳಸಿ ಈ ಕಟ್ಟಡವನ್ನು ಕೆಡವಿದ್ದು, ಇದೀಗ ನೆಲ ಸಮವಾಗಿದೆ. ಯಾರು, ಯಾವ ಕಾರಣಕ್ಕಾಗಿ ಇದನ್ನು ನೆಲಸಮ ಮಾಡಲಾಗಿದೆ ಎಂಬವುದು ತಿಳಿದು ಬಂದಿಲ್ಲ. ಬಂಟ್ವಾಳ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.