ಜಿಪಂ ವ್ಯಾಪ್ತಿಯ ಇಲಾಖೆಗಳು ಶಿಷ್ಟಾಚಾರ ಪಾಲಿಸಲಿ: ಸಿಇಒ
ಮಂಗಳೂರು, ಜು. 2: ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ 2017-18ನೇ ಸಾಲಿನ ಕ್ರಿಯಾ ಯೋಜನೆ ಅನುಮೋದನೆ ವೇಳೆ ಮಂಗಳಾ ಕ್ರೀಡಾಂಗಣಕ್ಕೆ ಸೇರಿದಂತೆ ತಾಲೂಕು ಕ್ರೀಡಾಂಗಣಗಳಿಗೆ ಹಾಗೂ ಕ್ರೀಡಾ ಸಾಮಗ್ರಿ ಖರೀದಿಗೆ ಅವಕಾಶ ನೀಡುವುದಿಲ್ಲ ಎಂದು ಜಿಪಂ ಸದಸ್ಯರು ಸೋಮವಾರ ನಡೆದ ದ.ಕ.ಜಿಪಂನ 12ನೇ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.
ಮಂಗಳಾ ಕ್ರೀಡಾಂಗಣ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿದ್ದು, ತಮ್ಮ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಕ್ರೀಡಾಂಗಣ ಅಭಿವೃದ್ಧಿ ಹಾಗೂ ಯುವಕ ಮಂಡಳಿಗಳಿಗೆ ನೀಡುವಂತಾಗಬೇಕು; ನಮ್ಮ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿ ಖರೀದಿಗೆ ಅವಕಾಶ ಒದಗಿಸಬೇಕೆಂದು ಸದಸ್ಯರು ಒತ್ತಾಯಿಸಿದರು.
ಸದಸ್ಯರ ಒತ್ತಾಯದಂತೆ ಕ್ರಿಯಾಯೋಜನೆಗೆ ಅನುಮೋದನೆ ನೀಡದೆ ಪ್ರತ್ಯೇಕವಾಗಿ ಸಭೆ ಕರೆಯಲು ಸಭಾಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಸೂಚಿಸಿದರು. ಈ ಸಂದರ್ಭ ಮಾತನಾಡಿದ ಜಿಪಂ ಸಿಇಒ ಡಾ. ಎಂ.ಆರ್. ರವಿ ಅವರು, ಜಿಪಂ ವ್ಯಾಪ್ತಿಗೆ ಬರುವ ಇಲಾಖೆಗಳ ಆಡಳಿತ ಜಿಪಂ ನಿರ್ವಹಣೆಗೊಳಪಟ್ಟು ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು ಸಮಿತಿಯಲ್ಲಿರಬೇಕೆಂದು ಹೇಳಿದರಲ್ಲದೆ ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಮಂಗಳಾ ಕ್ರೀಡಾಂಗಣ ಸಮಿತಿ ರಚನೆಯನ್ನು ಪುನಃರಚಿಸುವಂತೆ ಸೂಚಿಸಿದರು.
ಜಿಪ ವ್ಯಾಪ್ತಿಯಡಿ ಬರುವ ಎಲ್ಲ ಇಲಾಖೆಗಳು ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಕ್ರಮವಹಿಸಿ ಎಂದು ಆದೇಶಿಸಿದ ಸಿಇಒ, ಅನುದಾನ ಲ್ಯಾಪ್ಸ್ ಆಗದಂತೆಯೂ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೊರಗ ಮಕ್ಕಳ ಪಿಯುಸಿ ಹಾಗೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಅವರಿಗೆ ಈಗ ನೀಡುತ್ತಿರುವ ನೆರವಿನ ವಿಧಾನವನ್ನು ಬದಲಿಸಿ ಅವರಿಗೆ ಪ್ರವೇಶಾತಿ ವೇಳೆಯೆ ಶಿಕ್ಷಣ ಶುಲ್ಕ ಪಾವತಿಸುವಂತೆ ಕ್ರಿಯಾ ಯೋಜನೆ ರೂಪಿಸಲು ಸಿಇಒ ಐಟಿಡಿಪಿ ಅಧಿಕಾರಿಗೆ ಸೂಚನೆ ನೀಡಿದರು.