ಆರ್‌ಟಿಐ ಕಾರ್ಯಕರ್ತನ ಹತ್ಯೆ: ಜೆಡಿಯು ನಾಯಕ ಪೊಲೀಸ್ ವಶಕ್ಕೆ

Update: 2018-07-02 16:42 GMT

ಪಾಟ್ನಾ, ಜು.2: ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದ ಆರ್‌ಟಿಐ ಕಾರ್ಯಕರ್ತ ಹಾಗೂ ಆತನ ಗೆಳೆಯನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು ಜೆಡಿಯು ನಾಯಕ ಹಾಗೂ ಇತರ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹತ್ಯೆ ಹಿನ್ನೆಲೆಯಲ್ಲಿ ನೂರಾರು ಆಕ್ರೋಶಿತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 333ರಲ್ಲಿ ಟಯರ್‌ಗಳಿಗೆ ಬೆಂಕಿ ಹಚ್ಚಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.

ರವಿವಾರದಂದು ಬಿಚ್ವೆ ಗ್ರಾಮದ ಸಮೀಪ ವಾಲ್ಮಿಕಿ ಯಾದವ್ ಹಾಗೂ ಅವರ ಗೆಳೆಯ ಕರು ಯಾದವ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೃಷ್ಣ ರವಿದಾಸ್ ಎಂಬಾತನನ್ನು ಬಂಧಿಸಿದ್ದರೆ ಜೆಡಿಯು ಬ್ಲಾಕ್ ಅಧ್ಯಕ್ಷ ಸುರೇಶ್ ಮಹ್ತೊ ಹಾಗೂ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಸಾರ್ವಜನಿಕ ಕಲ್ಯಾಣ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ನಡೆದಿರುವ ಅವ್ಯವಹಾರ ಸೇರಿದಂತೆ ಹಲವು ಹಗರಣಗಳನ್ನು ವಾಲ್ಮಿಕಿ ಯಾದವ್ ಬಹಿರಂಗಪಡಿಸಿದ್ದರು. ಹಾಗಾಗಿ ಇದೊಂದು ಯೋಜಿತ ಹತ್ಯೆಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News