ಕಥುವಾ ಅತ್ಯಾಚಾರ, ಕೊಲೆ ಪ್ರಕರಣ: ಬಾಲಾಪರಾಧಿ ಎಂದು ಹೇಳಲಾದ ಆರೋಪಿಗೆ 20 ವರ್ಷ

Update: 2018-07-02 16:58 GMT

ಹೊಸದಿಲ್ಲಿ, ಜು.3: ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಾಲಾಪರಾಧಿ ಎಂದು ಹೇಳಲಾದ ಆರೋಪಿಗೆ 20 ವರ್ಷ ಮೀರಿದೆ ಎಂದು ವೈದ್ಯಕೀಯ ವರದಿಯಲ್ಲಿ ಸಾಬೀತಾಗಿದೆ. ವರದಿಯನ್ನು ಜಮ್ಮು ಕಾಶ್ಮೀರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಲಾಗಿದೆ.

ಬೇಸಿಗೆಯ ರಜಾ ಅವಧಿ ಮುಗಿದು ಕೋರ್ಟ್‌ನಲ್ಲಿ ವಿಚಾರಣೆ ಪುನರಾರಂಭಗೊಂಡಿದ್ದು, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜೆ.ಕೆ.ಛೋಪ್ರಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಅಮಾನುಷ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎಂಟು ಆರೋಪಿಗಳಿದ್ದು ಇವರಲ್ಲಿ ಪರ್ವೇಶ್ ಕುಮಾರ್ ಅಲಿಯಾಸ್ ಮನ್ನು ಎಂಬಾತ ಬಾಲಾಪರಾಧಿ ಎಂದು ಹೇಳಲಾಗಿತ್ತು. ಇದೀಗ ಪರ್ವೇಶ್ ಕುಮಾರ್‌ನ ವಯಸ್ಸನ್ನು ಖಚಿತಪಡಿಸಿಕೊಳ್ಳಲು ಆರೋಪಿಯ ಮೂಳೆ ಗಡಸು ಪರೀಕ್ಷೆ ನಡೆಸುವಂತೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ತಜ್ವೀಂದರ್ ಸಿಂಗ್ ಆದೇಶ ನೀಡಿದ್ದಾರೆ.

ಈ ಮಧ್ಯೆ, ಕುಮಾರ್ ಮೇಲೆ ಕ್ರೈಂಬ್ರಾಂಚ್ ಪೊಲೀಸರು ಜೂನ್ 23ರಂದು ವಿಚಾರಣೆಯ ನೆಪದಲ್ಲಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಡಿಫೆನ್ಸ್ ವಕೀಲರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರತ್ಯೇಕ ಅರ್ಜಿ ದಾಖಲಿಸಿದ್ದಾರೆ. ಈ ಆರೋಪವನ್ನು ನಿರಾಕರಿಸಿರುವ ಪೊಲೀಸರು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇವೆ ಎಂದಿದ್ಧಾರೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಬೇಕು ಎಂದು ಕುಮಾರ್ ಮೇಲೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ವಕೀಲರು ಆರೋಪಿಸಿದ್ದು, ಯಾರನ್ನೂ ಮಾಫಿ ಸಾಕ್ಷಿಯಾಗಿಸುವ ಮಾತೇ ಇಲ್ಲ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News