ಬಿಜೆಪಿ ಕಾರ್ಯಕರ್ತನ ಮೃತದೇಹ ಕಾಲು-ಕೈಗಳನ್ನು ಕಟ್ಟಿದ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆ
ಮುರ್ಶಿದಾಬಾದ್, (ಪ.ಬಂಗಾಳ), ಜು.2: ತಿಂಗಳ ಹಿಂದೆ ಇಬ್ಬರು ಬಿಜೆಪಿ ಕಾರ್ಯಕರ್ತರ ಮೃತದೇಹಗಳು ಪಶ್ಚಿಮ ಬಂಗಾಳದ ಪುರುಲಿಯದಲ್ಲಿ ಪತ್ತೆಯಾಗಿದ್ದು, ಈ ಘಟನೆಯ ನೆನಪು ಮಾಸುವ ಮುನ್ನವೇ ಸೋಮವಾರ ಇನ್ನೋರ್ವ ಬಿಜೆಪಿ ಕಾರ್ಯಕರ್ತನ ದೇಹವು ಮುರ್ಶಿದಾಬಾದ್‌ನ ಕೆರೆಯೊಂದರಲ್ಲಿ ಕಾಲು ಮತ್ತು ಕೈಗಳನ್ನು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಧರ್ಮರಾಜ್ ಹಝ್ರಿ (54) ಎಂದು ಗುರುತಿಸಲಾಗಿದ್ದು. ಇವರ ಮೃತದೇಹವು ಮುರ್ಶಿದಾಬಾದ್‌ನ ಶಕ್ತಿಪುರ ಗ್ರಾಮದಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವೇ ಹೊಣೆ ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಗೌರಿ ಶಂಕರ್ ಘೋಶ್ ಆರೋಪಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಏಳಿಗೆಯನ್ನು ಸಹಿಸದ ಟಿಎಂಸಿ ಬಿಜೆಪಿಯ ಕಾರ್ಯಕರ್ತರನ್ನು ಹತ್ಯೆ ಮಾಡುವ ಕಾರ್ಯದಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿಯನ್ನು ಬೆಂಬಲಿಸಿದ ಕಾರಣಕ್ಕೆ ಪಂಚಾಯತ್ ಚುನಾವಣೆಗಳ ಸಮಯದಿಂದಲೂ ಹಝ್ರಗೆ ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತರಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ರವಿವಾರ ಅವರು ಹಝ್ರಿರನ್ನು ಹತ್ಯೆ ಮಾಡಿ ಕೆರೆಗೆ ಎಸೆದಿದ್ದಾರೆ ಎಂದು ಘೋಶ್ ಆರೋಪಿಸಿದ್ದಾರೆ. ಮೇ 31ರಂದು ಪುರುಲಿಯದಲ್ಲಿ ಬಿಜೆಪಿ ಕಾರ್ಯಕರ್ತ ತ್ರಿಲೋಚನ್ ಪಹತೊ ಮೃತದೇಹವು ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದಾದ ಎರಡೇ ದಿನಗಳ ನಂತರ ಜೂನ್ 2ರಂದು ಬಿಜೆಪಿಯ ಇನ್ನೋರ್ವ ಕಾರ್ಯಕರ್ತ ದುಲಾಲ್ ಕುಮಾರ್ ಮೃತದೇಹವು ವಿದ್ಯುತ್ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪಕ್ಷದ ಕಾರ್ಮಿಕ ವಿಭಾಗದ ಅಧ್ಯಕ್ಷ ಪರಿಮಳ್ ಮಹತೊ ಅವರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ಸೋಮವಾರದಂದು ಬಿಜೆಪಿ ಕಾರ್ಯಕರ್ತರು ಪುರುಲಿಯ ಜಿಲ್ಲೆಯ ಸಂತಾಲ್ದಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು. ಆದರೆ ನಂತರ ಮಹತೊ ತೃಣಮೂಲ ಕಾಂಗ್ರೆಸ್ ಸೇರಿರುವ ಮಾಹಿತಿ ಲಭ್ಯವಾಗಿತ್ತು.