×
Ad

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಬಿಗಿ ಭದ್ರತೆಯಲ್ಲಿ ವಿಚಾರಣೆ ಆರಂಭ; ಗುಲಾಬಿ ಶೆಡ್ತಿಯಿಂದ ಸಾಕ್ಷ್ಯ

Update: 2018-07-02 22:48 IST

ಉಡುಪಿ, ಜು.2: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಕೊಲೆಗೈದು ಹೋಮಕುಂಡದಲ್ಲಿ ಸುಟ್ಟ ಪ್ರಕರಣದ ಸಾಕ್ಷಿಗಳ ವಿಚಾರಣೆಯು ಸೋಮವಾರ ಬಿಗಿ ಪೊಲೀಸ್ ಭದ್ರತೆಯ ಮಧ್ಯೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರಂಭಗೊಂಡಿತು.

ಮೊದಲ ದಿನದ ವಿಚಾರಣೆಯು ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಡೆದಿದ್ದು, ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ದೂರುದಾರರಾದ ಮೃತ ಭಾಸ್ಕರ್ ಶೆಟ್ಟಿಯ ತಾಯಿ ಗುಲಾಬಿ ಶೆಡ್ತಿ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ನುಡಿದರು. ಇವರ ಹೇಳಿಕೆಯನ್ನು ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಪಡೆದುಕೊಂಡರು.

ಗುಲಾಬಿ ಶೆಡ್ತಿಯ ವಿಚಾರಣೆ ಜು.3ರಂದು ಕೂಡ ಮುಂದುವರೆಯಲಿದ್ದು, ಆರೋಪಿ ಪರ ವಕೀಲ ಮೈಸೂರಿನ ಅಶ್ವಿನಿ ಕುಮಾರ್ ಜೋಶಿ ಇವರನ್ನು ಪಾಟಿ ಸವಾಲಿಗೆ ಒಳಪಡಿಸಲಿದ್ದಾರೆ. ಶಾಂತಿ ಬಾಯಿ ಜು.3ರಂದು ಪ್ರಕರಣದ ಮೊದಲ ತನಿಖಾಧಿಕಾರಿಯಾಗಿದ್ದ ಆಗಿನ ಮಣಿಪಾಲ ಪೊಲೀಸ್ ನಿರೀಕ್ಷಕ ಎಸ್.ವಿ.ಗಿರೀಶ್ ಅವರಿಂದ ಸಾಕ್ಷಿ ಹೇಳಿಕೆ ಪಡೆದುಕೊಳ್ಳಲಿದ್ದಾರೆ.

ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯದ ಕಾನ್ಫೆರೆನ್ಸ್ ಹಾಲ್‌ನಲ್ಲಿ ಸ್ಥಳಾವಕಾಶದ ಕೊರತೆಯ ಹಿನ್ನೆಲೆಯಲ್ಲಿ ತೆರೆದ ನ್ಯಾಯಾಲಯದಲ್ಲಿಯೇ ನಡೆಸ ಲಾಯಿತು. ಅಲ್ಲಿಯೇ ಪ್ರೊಜೆಕ್ಟರ್‌ಗಳನ್ನು ಅಳವಡಿಸಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಾದ ಭಾಸ್ಕರ್ ಶೆಟ್ಟಿಯ ಪತ್ನಿ ರಾಜೇಶ್ವರಿ ಶೆಟ್ಟಿ(50), ಮಗ ನವನೀತ್ ಶೆಟ್ಟಿ(20) ಹಾಗೂ ನಂದಳಿಕೆಯ ನಿರಂಜನ್ ಭಟ್(26) ಅವರೊಂದಿಗೆ ವೀಡಿಯೊ ಕಾನ್ಫೆರೆನ್ಸ್ ನಡೆಸಲಾಯಿತು.

ಭದ್ರತೆಯ ಕಾರಣಕ್ಕಾಗಿ ಈ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಜಾಮೀನಿನಲ್ಲಿ ಬಿಡುಗಡೆ ಗೊಂಡಿರುವ ಸಾಕ್ಷನಾಶ ಆರೋಪಿಗಳಾದ ನಿರಂಜನ್ ಭಟ್ ಅವರ ತಂದೆ ಶ್ರೀನಿವಾಸ ಭಟ್(56) ಹಾಗೂ ಕಾರು ಚಾಲಕ ರಾಘವೇಂದ್ರ(26) ವಿಚಾರಣೆ ವೇಳೆ ಹಾಜರಿದ್ದರು.

ಈ ಸಂದರ್ಭದಲ್ಲಿ ಆರೋಪಿ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಪರ ವಕೀಲರಾದ ಅರುಣ್ ಬಂಗೇರ, ಅರುಣ್ ಕುಮಾರ್ ಶೆಟ್ಟಿ, ಕಲ್ಯಾಣ್ ಜೋಶಿ, ಆರೋಪಿ ನಿರಂಜನ್ ಭಟ್ ಪರ ವಕೀಲ ವಿಕ್ರಂ ಹೆಗ್ಡೆ, ಎ.ಸಂಜೀವ ಮೊದಲಾದವರು ಉಪಸ್ಥಿತರಿದ್ದರು. ಪ್ರಕರಣದ ಒಟ್ಟು 167 ಸಾಕ್ಷಿಗಳ ಪೈಕಿ 44 ಮಂದಿ ಸಾಕ್ಷಿಗಳ ವಿಚಾರಣೆಯು ಜು.6ರವರೆಗೆ ಹಾಗೂ ಜು.16ರಿಂದ 19ರವರೆಗೆ ನಡೆಯಲಿದೆ.

ಕೋರ್ಟ್‌ನಲ್ಲಿ ಪೊಲೀಸ್ ಕಣ್ಗಾವಲು
ವಿಚಾರಣೆಯ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದ್ದು, ಕೋರ್ಟ್ ಸಂಕೀರ್ಣದ ಮೊದಲ ಮಹಡಿಯಲ್ಲಿ ರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರವೇಶ ದ್ವಾರದಲ್ಲಿ ಲೋಹ ಶೋಧಕ ಯಂತ್ರವನ್ನು ಅಳವಡಿಸಲಾಗಿತ್ತು. ನ್ಯಾಯಾಲಯದೊಳಗೆ ವಕೀಲರ ಹೊರತು ಯಾರಿಗೂ ಪ್ರವೇಶ ಇರಲಿಲ್ಲ.

ಅಲ್ಲದೆ ಕೋರ್ಟ್‌ನ ಒಳಗೆ ಮತ್ತು ಹೊರಗಡೆ ಶಸ್ತ್ರ ಸಜ್ಜಿತ ಪೊಲೀಸ್ ಸಿಬ್ಬಂದಿಯನ್ನು ಕೂಡ ನಿಯೋಜಿಸಲಾಗಿತ್ತು. ಸಾಕ್ಷಿ ನುಡಿಯಲು ಕೋರ್ಟ್‌ಗೆ ಆಗಮಿಸಿದ ಗುಲಾಬಿ ಶೆಡ್ತಿಯವರಿಗೆ ಪೊಲೀಸ್ ಭದ್ರತೆಯನ್ನು ನೀಡಲಾಗಿತ್ತು.

ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಕೋರ್ಟ್ ಒಳಗೆ ಹಾಜರಿದ್ದು ವಿಚಾರಣೆಯನ್ನು ವೀಕ್ಷಿಸಿದರು. ಹೊರಗಡೆ ಉಡುಪಿ ಡಿವೈಎಸ್ಪಿ ಜೈಶಂಕರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಿರೀಕ್ಷಕ ರಾಘವೇಂದ್ರ, ಮಣಿಪಾಲ ಪೊಲೀಸ್ ನಿರೀಕ್ಷಕ ಸುದರ್ಶನ್ ಮೊದಲಾದವರು ಭದ್ರತೆಯ ನೇತೃತ್ವವನ್ನು ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News