ರೊಹಿಂಗ್ಯನ್ನರ ಮೇಲೆ ಊಹೆಗೂ ನಿಲುಕದ ದೌರ್ಜನ್ಯ

Update: 2018-07-02 17:23 GMT

ಕುಟುಪಲಾಂಗ್ (ಬಾಂಗ್ಲಾದೇಶ), ಜು. 2: ಬಾಂಗ್ಲಾದೇಶದಲ್ಲಿರುವ ರೊಹಿಂಗ್ಯಾ ಮುಸ್ಲಿಮರ ವಿಶಾಲ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿದ ವೇಳೆ, ಊಹೆಗೂ ನಿಲುಕದ ದೌರ್ಜನ್ಯಗಳ ಬಗ್ಗೆ ತಾನು ಕೇಳಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಹೇಳಿದ್ದಾರೆ.

ಇಲ್ಲಿ ಆಶ್ರಯ ಪಡೆದಿರುವ ರೊಹಿಂಗ್ಯಾ ನಿರಾಶ್ರಿತರ ಪರಿಸ್ಥಿತಿಯು ‘‘ಮಾನವೀಯ ಮತ್ತು ಮಾನವಹಕ್ಕುಗಳ ದುರಂತವಾಗಿದೆ’’ ಎಂದು ಅವರು ಬಣ್ಣಿಸಿದರು.

ಬಾಂಗ್ಲಾದೇಶದ ಕಾಕ್ಸ್‌ಬಜಾರ್ ಜಿಲ್ಲೆಯ ಕುಟುಪಲಾಂಗ್‌ನಲ್ಲಿರುವ ನಿರಾಶ್ರಿತ ಶಿಬಿರಗಳಿಗೆ ಸೋಮವಾರ ಭೇಟಿ ನೀಡಿದ ಬಳಿಕ ಅವರು ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ರಖೈನ್ ರಾಜ್ಯದಲ್ಲಿ ಮ್ಯಾನ್ಮಾರ್ ಸೇನೆ ನಡೆಸಿದ ಅಮಾನುಷ ದಮನ ಕಾರ್ಯಾಚರಣೆಗೆ ಬೆದರಿ 6 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿರುವುದನ್ನು ಸ್ಮರಿಸಬಹುದಾಗಿದೆ.

ಮ್ಯಾನ್ಮಾರ್ ಸೇನೆಯ ಕಾರ್ಯಾಚರಣೆಯು ‘ಜನಾಂಗೀಯ ನಿರ್ಮೂಲನೆ’ಯಾಗಿದೆ ಎಂಬುದಾಗಿ ವಿಶ್ವಸಂಸ್ಥೆ ಬಣ್ಣಿಸಿರುವುದನ್ನು ಸ್ಮರಿಸಬಹುದಾಗಿದೆ.

‘‘ಬಾಂಗ್ಲಾದೇಶದ ಕಾಕ್ಸ್‌ಬಜಾರ್‌ನಲ್ಲಿ, ಮ್ಯಾನ್ಮಾರ್ ಸೇನೆ ನಡೆಸಿದ ಹತ್ಯೆಗಳು ಮತ್ತು ಅತ್ಯಾಚಾರಗಳ ಊಹೆಗೂ ನಿಲುಕದ ವಿವರಗಳನ್ನು ಇತ್ತೀಚೆಗೆ ಮ್ಯಾನ್ಮಾರ್‌ನಿಂದ ಪಲಾಯನಗೈದಿರುವ ರೊಹಿಂಗ್ಯಾ ಮುಸ್ಲಿಮರಿಂದ ನಾನು ಕೇಳಿದೆ. ಅವರು ನ್ಯಾಯ ಮತ್ತು ಸುರಕ್ಷಿತ ವಾಪಸಾತಿಯನ್ನು ಬಯಸುತ್ತಿದ್ದಾರೆ’’ ಎಂದು ಗುಟರಸ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘‘ರೊಹಿಂಗ್ಯಾ ಸಮುದಾಯವು ಭೂಮಿಯಲ್ಲಿರುವ ಅತ್ಯಂತ ದುರ್ಬಲ ಹಾಗೂ ಅತಿ ಹೆಚ್ಚಿನ ತಾರತಮ್ಯಕ್ಕೊಳಗಾದ ಸಮುದಾಯಗಳಲ್ಲಿ ಒಂದಾಗಿದೆ’’ ಎಂದು ಅವರು ಶಿಬಿರಗಳಿಗೆ ಭೇಟಿ ನೀಡುವ ಮುನ್ನ ಮಾಡಿದ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಮಾನವೀಯತೆಯ ದೊಡ್ಡ ಉದಾಹರಣೆ

‘‘ರೊಹಿಂಗ್ಯಾ ನಿರಾಶ್ರಿತರಿಗೆ ಹಾಗೂ ಅವರನ್ನು ಬೆಂಬಲಿಸುವ ಸಮುದಾಯಗಳಿಗೆ ಬೆಂಬಲ ನೀಡುವುದಕ್ಕಾಗಿ ನಾನು ಅಲ್ಲಿಗೆ ಹೋದೆ’’ ಎಂದು ಗುಟರಸ್ ಹೇಳಿದರು.

‘‘ಬಾಂಗ್ಲಾದೇಶದ ಜನತೆ ತೋರಿಸಿದ ಅನುಕಂಪ ಮತ್ತು ಔದಾರ್ಯ ಮಾನವೀಯತೆಯ ದೊಡ್ಡ ಉದಾಹರಣೆಯಾಗಿದೆ ಹಾಗೂ ಇವು ಹಲವು ಸಾವಿರ ಜೀವಗಳನ್ನು ಬದುಕಿಸಿದೆ’’ ಎಂದು ಅವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News