ಸಿರಿಯ: 8 ಪಟ್ಟಣಗಳು ಸರಕಾರದ ವಶ

Update: 2018-07-02 17:27 GMT

ಬೈರೂತ್ (ಲೆಬನಾನ್), ಜು. 2: ಶನಿವಾರ ರಶ್ಯ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ಬಳಿಕ, ದಕ್ಷಿಣ ಸಿರಿಯದಲ್ಲಿ ಬಂಡುಕೋರ ನಿಯಂತ್ರಣದ 8 ಪಟ್ಟಣಗಳು ಸರಕಾರದ ವಶಕ್ಕೆ ಬಂದಿವೆ.

ಅದೇ ವೇಳೆ, ಸರಕಾರಿ ಪಡೆಗಳು ಈ ಪ್ರದೇಶಗಳಲ್ಲಿ ನಡೆಸಿದ ವಾಯುದಾಳಿಗಳಲ್ಲಿ ಕನಿಷ್ಠ 15 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಸಿರಿಯ ಪಡೆಗಳು ಮಿತ್ರ ದೇಶ ರಶ್ಯದ ಬೆಂಬಲದೊಂದಿಗೆ ಜೂನ್ 19ರಿಂದ ದಕ್ಷಿಣ ಸಿರಿಯದಲ್ಲಿ ಭೀಕರ ಬಾಂಬ್ ದಾಳಿಗಳನ್ನು ನಡೆಸುತ್ತಿದೆ. ಜೋರ್ಡಾನ್ ಮತ್ತು ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ನೊಂದಿಗೆ ಗಡಿ ಹಂಚಿಕೊಂಡಿರುವ ಆಯಕಟ್ಟಿನ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಸಿರಿಯ ಆಡಳಿತ ತನ್ನೆಲ್ಲ ಶಕ್ತಿ ಸಾಮರ್ಥ್ಯಗಳನ್ನು ಬಳಸುತ್ತಿದೆ.

ಶನಿವಾರ ಸರಕಾರಿ ಪಡೆಗಳು ದರಾ ಪ್ರಾಂತದ ಅರ್ಧಕ್ಕೂ ಹೆಚ್ಚಿನ ಪ್ರದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ದರಾ ಪ್ರಾಂತದ ಇತರ ಪ್ರದೇಶಗಳ ಮೇಲೆ ದಾಳಿ ನಡೆಸುವುದನ್ನು ಸರಕಾರಿ ಪಡೆಗಳು ಶನಿವಾರವೂ ಮುಂದುವರಿಸಿವೆ ಎಂದು ವೀಕ್ಷಣಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News