ಕತರ್ ಹಜ್ ಯಾತ್ರಿಗಳಿಗಾಗಿ ಪ್ರತ್ಯೇಕ ಲಿಂಕ್: ಸೌದಿ ಅರೇಬಿಯ
ಜಿದ್ದಾ, ಜು. 2: ಈ ವರ್ಷದ ಹಜ್‌ಗಾಗಿ ಜಗತ್ತಿನ ಎಲ್ಲೆಡೆಗಳಿಂದ ಸೌದಿ ಅರೇಬಿಯಕ್ಕೆ ಆಗಮಿಸಲಿರುವ 20 ಲಕ್ಷ ಯಾತ್ರಿಕರಿಗಾಗಿ ಮಾಡಬೇಕಿರುವ ಸಿದ್ಧತೆಗಳನ್ನು ಹಜ್ ಮತ್ತು ಉಮ್ರಾ ಸಚಿವಾಲಯ ಅಂತಿಮಗೊಳಿಸಿದೆ.
ಅದೇ ವೇಳೆ, ‘ಸಿದ್ಧತೆಗಳನ್ನು ಅಂತಿಮಗೊಳಿಸುವಲ್ಲಿ ಕತರ್ ಅಧಿಕಾರಿಗಳ ಸಹಕಾರದ ಕೊರತೆಯ ಹಿನ್ನೆಲೆಯಲ್ಲಿ’, ಕತರ್‌ನಿಂದ ಬರುವ ಯಾತ್ರಿಗಳ ಮನವಿಗಳೊಂದಿಗೆ ವ್ಯವಹರಿಸಲು ವಿಶೇಷ ಕೊಂಡಿಯೊಂದನ್ನು ಮೀಸಲಿಡಲು ಸೌದಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಹಜ್ ನಿರ್ವಹಿಸಬಯಸುವ ಕತರ್ ರಾಷ್ಟ್ರೀಯರು ಈ ವರ್ಷ ಸೌದಿಯ ಹಜ್ ಸಚಿವಾಲಯದ ವೆಬ್‌ಸೈಟ್‌ನಲ್ಲಿರುವ ಈ ಕೊಂಡಿ (ಲಿಂಕ್)ಯ ಮೂಲಕ ತಮ್ಮನ್ನು ನೋಂದಾಯಿಸಬಹುದಾಗಿದೆ.
ಮಕ್ಕಾ ಮತ್ತು ಮದೀನಾಗಳಲ್ಲಿ ವಾಸ್ತವ್ಯ, ಪ್ರಯಾಣ ಮತ್ತು ಆಹಾರ ವ್ಯವಸ್ಥೆಗೂ ಕತರ್ ಯಾತ್ರಿಕರು ಇದೇ ಕೊಂಡಿಯನ್ನು ಆಶ್ರಯಿಸಬಹುದಾಗಿದೆ.
ಕತರ್ ಯಾತ್ರಿಗಳ ಆಗಮನ ಮತ್ತು ನಿರ್ಗಮನಗಳು ಜಿದ್ದಾದಲ್ಲಿರುವ ದೊರೆ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಡೆಯುತ್ತವೆ. ಹಾಗೂ ಅವರು ಕತರ್ ಏರ್‌ವೇಸ್ ಹೊರತುಪಡಿಸಿ ಬೇರೆ ಯಾವುದೇ ವಿಮಾನಯಾನ ಸಂಸ್ಥೆಗಳ ಮೂಲಕ ಪ್ರಯಾಣಿಸಬಹುದಾಗಿದೆ.
ಜಗತ್ತಿನ ಯಾವುದೇ ಭಾಗದ ವಿವಿಧ ರಾಷ್ಟ್ರೀಯತೆಗಳು, ಪಂಥಗಳು ಮತ್ತು ಜನಾಂಗಗಳ ಯಾತ್ರಿಕರನ್ನು ಸೌದಿ ಅರೇಬಿಯ ಸ್ವಾಗತಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.