ಮೆಕ್ಸಿಕೊ: ಪ್ರತಿಪಕ್ಷ ನಾಯಕ ಲೊಪೆಝ್‌ಗೆ ಭರ್ಜರಿ ಗೆಲುವು
Update: 2018-07-02 23:26 IST
ಮೆಕ್ಸಿಕೊ ಸಿಟಿ, ಜು. 2: ಮೆಕ್ಸಿಕೊದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಆ್ಯಂಡ್ರಿಸ್ ಮ್ಯಾನುಯೆಲ್ ಲೊಪೆಝ್ ಓಬ್ರಡರ್ ಭರ್ಜರಿ ವಿಜಯವನ್ನು ಸಾಧಿಸಿದ್ದಾರೆ.
ಬದಲಾವಣೆಯ ಹರಿಕಾರನೆಂದು ತನ್ನನ್ನು ತಾನು ಕರೆದುಕೊಂಡಿರುವ ಲೊಪೆಝ್ ರವಿವಾರ ನಡೆದ ಮತದಾನದಲ್ಲಿ 53 ಶೇಕಡಕ್ಕೂ ಅಧಿಕ ಮತಗಳನ್ನು ಗಳಿಸಿದ್ದಾರೆ. ಇದು ಅವರ ಸಮೀಪದ ಪ್ರತಿಸ್ಪರ್ಧಿ ಗಳಿಸಿದ ಮತಗಳ ಅರ್ಧಕ್ಕಿಂತಲೂ ಹೆಚ್ಚಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
‘‘ಇಂದು ಅವರು ನಮ್ಮ ವಿಜಯವನ್ನು ಗುರುತಿಸಿದ್ದಾರೆ’’ ಎಂದು ರವಿವಾರ ರಾತ್ರಿ ಮೆಕ್ಸಿಕೊ ಸಿಟಿಯಲ್ಲಿ ತನ್ನ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಲೊಪೆಝ್ ಹೇಳಿದರು.
ಅಧ್ಯಕ್ಷ ಎನ್ರಿಕ್ ಪೆನ ನೀಟೊ ಬಳಿಕ ಲೊಪೆಝ್‌ರಿಗೆ ಕರೆ ಮಾಡಿ ಅವರನ್ನು ಅಭಿನಂದಿಸಿದರು ಹಾಗೂ ವ್ಯವಸ್ಥಿತ ಅಧಿಕಾರ ಹಸ್ತಾಂತರಕ್ಕಾಗಿ ನೆರವಾಗುವ ಭರವಸೆ ನೀಡಿದರು.
ಲೊಪೆಝ್ ಡಿಸೆಂಬರ್ 1ರಂದು ಔಪಚಾರಿಕವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.