×
Ad

ಮಂಗಳೂರು: ನ್ಯಾಯಾಧೀಶರು, ವಕೀಲರಿಂದ ರಕ್ತದಾನ

Update: 2018-07-03 18:18 IST

ಮಂಗಳೂರು, ಜು.3: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಆರೋಗ್ಯ ಇಲಾಖೆ, ಮಂಗಳೂರು ವಕೀಲರ ಸಂಘ ಹಾಗೂ ವೆನ್ಲಾಕ್ ಬ್ಲಡ್ ಬ್ಯಾಂಕ್ ಆಶ್ರಯದಲ್ಲಿ ದ.ಕ.ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಮಂಗಳವಾರ ರಕ್ತದಾನ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು, ನ್ಯಾಯವಾದಿಗಳು, ಕೋರ್ಟ್ ಸಿಬ್ಬಂದಿ ವರ್ಗ, ಸಾರ್ವಜನಿಕರು ಸರತಿ ಸಾಲಿನಲ್ಲಿ ಆಗಮಿಸಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಕೆ.ಎಸ್.ಬೀಳಗಿ ರಕ್ತದಾನ ಮಾಡಿದ್ದನ್ನು ಯಾರೂ ಯಾರಲ್ಲಿಯೂ ಹೇಳಿಕೊಳ್ಳುವ ಅಗತ್ಯವಿಲ್ಲ. ರಕ್ತದಾನ ಮಾಡುವ ಮೂಲಕ ಇತರರ ಬದುಕಿಗೆ ನೆರವಾದೆ ಎಂಬ ಭಾವನೆ ನಮ್ಮಾಳಗೆ ಮೂಡಿದರೆ ಸಾಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಮಾತನಾಡಿ ರಕ್ತದಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿದೆ. ಕೆಲವು ಸಂದರ್ಭಗಳಲ್ಲಿ ಮಾಹಿತಿ ಕೊರತೆಯಿಂದ ಅಮಾಯಕರಿಗೆ ತೊಂದರೆಯಾಗುತ್ತಿದೆ. ಜಗತ್ತಿನಲ್ಲಿ 12 ಮಿಲಿಯನ್ ರಕ್ತದ ಆವಶ್ಯಕತೆ ಇದ್ದರೂ, ವಿವಿಧ ರಕ್ತ ಬ್ಯಾಂಕ್‌ಗಳಲ್ಲಿ 9 ಮಿಲಿಯನ್ ರಕ್ತ ಮಾತ್ರ ಸಿಗುತ್ತಿದೆ. ಹಾಗಾಗಿ ಯುವ ಜನಾಂಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ರಕ್ತದಾನ ಶಿಬಿರದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ(ಕಿರಿಯ ವಿಭಾಗ) ಹರೀಶ್ ಮತ್ತಿತರ ಪ್ರಮುಖರು ರಕ್ತದಾನ ಮಾಡಿ ಗಮನ ಸೆಳೆದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ನ ಉಸ್ತುವಾರಿ ಡಾ. ಶರತ್ ಮಾತನಾಡಿದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಂ. ಆರ್. ಬಳ್ಳಾಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ. ರಾಜೇಶ್, ಡಾ. ರತ್ನಾಕರ್ ಹಾಗೂ ನ್ಯಾಯಾಲಯದ ಎಲ್ಲಾ ವಿಭಾಗಗಳ 216 ಸಿಬ್ಬಂದಿಯು ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ದಿನಕರ ಶೆಟ್ಟಿ ವಂದಿಸಿದರು. ನ್ಯಾಯಾಲಯದ ಸಿಬ್ಬಂದಿ ಭೀಮರಾಯಪ್ಪಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News