ಸುಷ್ಮಾ ಸ್ವರಾಜ್‌ ವಿರುದ್ಧ ದ್ವೇಷಕಾರುವ ಟ್ವೀಟ್ ಗಳು ದುರದೃಷ್ಟಕರ: ನಿತಿನ್ ಗಡ್ಕರಿ

Update: 2018-07-03 13:55 GMT

ಹೊಸದಿಲ್ಲಿ,ಜು.3: ಲಕ್ನೋದ ಅಂತರ್‌ಧರ್ಮೀಯ ದಂಪತಿಗೆ ವಿತರಿಸಲಾದ ಪಾಸ್‌ಪೋರ್ಟ್‌ಗಳಿಗೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ವ್ಯಾಪಕ ಟೀಕೆಗಳಿಗೊಳಗಾಗಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಮಂಗಳವಾರ ಇಲ್ಲಿ ಬೆಂಬಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ದಾಖಲೆಗಳ ಮಂಜೂರಾತಿಯಲ್ಲಿ ಸ್ವರಾಜ್ ಅವರ ಯಾವುದೇ ಪಾತ್ರವಿಲ್ಲ ಎಂದು ಹೇಳಿದರು.

 ಮುಹಮ್ಮದ್ ಅನಾಸ್ ಸಿದ್ದಿಕಿಯವರ ಪತ್ನಿ ತನ್ವಿ ಸೇಠ್ ಅವರು ವಿವಾಹದ ನಂತರ ತನ್ನ ಹೆಸರನ್ನು ಬದಲಿಸಿಕೊಳ್ಳದ್ದಕ್ಕಾಗಿ ಅಧಿಕಾರಿಯೋರ್ವ ಆಕೆಗೆ ಕಿರುಕುಳ ನೀಡಿದ್ದು ಬೆಳಕಿಗೆ ಬಂದ ನಂತರ ಸೇಠ್‌ಗೆ ನೆರವಾಗಿದ್ದಕ್ಕಾಗಿ ಟ್ವಿಟರ್‌ನಲ್ಲಿ ಅವಮಾನಕಾರಿ ಟೀಕೆಗಳಿಗೆ ಸ್ವರಾಜ್ ಗುರಿಯಾಗಿದ್ದಾರೆ.

ಸ್ವರಾಜ್ ಅವರನ್ನು ಟ್ವಿಟರ್‌ನಲ್ಲಿ ಟೀಕಿಸುತ್ತಿರುವ ವೈಖರಿಯ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ ಗಡ್ಕರಿ,ಜನರು ಹೆಚ್ಚು ಜವಾಬ್ದಾರಿಯುತರಾಗಿರುವ ಅಗತ್ಯವಿದೆ ಎಂದು ಹೇಳಿದರು.

ಸ್ವರಾಜ್ ಅವರನ್ನು ಟೀಕಿಸುತ್ತಿರುವುದು ದುರದೃಷ್ಟಕರವಾಗಿದೆ. ತಾನು ಅವರೊಂದಿಗೆ ಚರ್ಚಿಸಿದ್ದೇನೆ. ಆದರೆ ಸೇಠ್ ಅವರಿಗೆ ಪಾಸ್‌ಪೋರ್ಟ್ ನೀಡಲು ನಿರ್ಧರಿಸಿದಾಗ ಸ್ವರಾಜ್ ದೇಶದಲ್ಲಿರಲಿಲ್ಲ. ಅವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅವರ ವಿರುದ್ಧ ಬಳಕೆಯಾಗುತ್ತಿರುವ ಶಬ್ದಗಳನ್ನು ಜನರು ಇಷ್ಟಪಡುತ್ತಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಯೊಬ್ಬರೂ ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

ಸ್ವರಾಜ್ ಅವರು ಇಂತಹ ಟ್ರೋಲ್‌ಗಳ ಕುರಿತು ಟ್ವಿಟರ್‌ನಲ್ಲಿ ಜನಾಭಿಪ್ರಾಯ ಕೋರಿದ್ದು,ಶೇ.43ರಷ್ಟು ಜನರು ಅವುಗಳನ್ನು ತಾವು ಇಷ್ಟಪಡುತ್ತೇವೆ ಎಂದಿದ್ದರೆ,ಶೇ.57ರಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದರು.

‘‘ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ದಯವಿಟ್ಟು ಟೀಕಿಸಿ,ಆದರೆ ತಪ್ಪು ಭಾಷೆಯನ್ನು ಬಳಸಬೇಡಿ. ಸಭ್ಯ ಭಾಷೆಯಲ್ಲಿನ ಟೀಕೆಗಳು ಯಾವಾಗಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ’’ ಎಂದು ಸ್ವರಾಜ್ ಇದಕ್ಕೂ ಮುನ್ನ ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News