×
Ad

ತಮಿಳುನಾಡು ಸರಕಾರದಿಂದ ಹಜ್ ಸಬ್ಸಿಡಿ ಘೋಷಣೆ

Update: 2018-07-03 19:29 IST

ಚೆನ್ನೈ,ಜು.3: ಕೆಲವು ತಿಂಗಳುಗಳ ಹಿಂದೆ ಕೇಂದ್ರವು ಹಜ್ ಯಾತ್ರಾರ್ಥಿಗಳಿಗೆ ಆರ್ಥಿಕ ನೆರವನ್ನು ರದ್ದುಗೊಳಿಸಿದ್ದನ್ನು ವಿರೋಧಿಸಿದ್ದ ತಮಿಳುನಾಡು ಸರಕಾರವು ಈ ವರ್ಷದಿಂದ ಹಜ್ ಯಾತ್ರೆಗೆ ಆರು ಕೋ.ರೂ.ಗಳ ವಾರ್ಷಿಕ ಸಬ್ಸಿಡಿಯನ್ನು ಒದಗಿಸುವುದಾಗಿ ಮಂಗಳವಾರ ಪ್ರಕಟಿಸಿದೆ.

ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರು ರಾಜ್ಯ ವಿಧಾನಸಭೆಯಲ್ಲಿ ಸರಕಾರದ ನಿರ್ಧಾರವನ್ನು ಪ್ರಕಟಿಸಿದರು.

ಕೇಂದ್ರ ಸರಕಾರವು ಹಜ್ ಸಬ್ಸಿಡಿಯನ್ನು ರದ್ದುಗೊಳಿಸಿರುವುದನ್ನು ಬೆಟ್ಟು ಮಾಡಿದ ಅವರು,ಅಮ್ಮಾ(ಜಯಲಲಿತಾ) ಅವರ ಸರಕಾರವು ಅವರು ತೋರಿಸಿದ ಮಾರ್ಗದಲ್ಲಿಯೇ ನಡೆಯುತ್ತಿದೆ. ರಾಜ್ಯ ಸರಕಾರವು ವಿದೇಶಗಳ ಪುಣ್ಯಕ್ಷೇತ್ರಗಳ ಯಾತ್ರೆಗಾಗಿ ಹಿಂದುಗಳು ಮತ್ತು ಕ್ರೈಸ್ತರಿಗೆ ಅನುದಾನವನ್ನು ನೀಡುತ್ತಿದೆ. ಈಗ ಮುಸ್ಲಿಮ್‌ರಿಗೂ ಇದನ್ನು ವಿಸ್ತರಿಸಲಾಗುವುದು. ಹಜ್ ಯಾತ್ರೆಗಾಗಿ ಪ್ರತಿವರ್ಷ ಆರು ಕೋ.ರೂಗಳ ಸಹಾಯಧನವನ್ನು ನೀಡಲಾಗುವುದು. ನೂತನ ಸಬ್ಸಿಡಿ ಯೋಜನೆಯಡಿ ಈ ವರ್ಷ ಒಟ್ಟು 3,728 ಜನರು ಹಜ್ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

2011ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ 2012ರಲ್ಲಿ ಆಗಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ತಮಿಳುನಾಡಿನಿಂದ ಚೀನಾದ ಮಾನಸ ಸರೋವರ ಮತ್ತು ನೇಪಾಳದ ಮುಕ್ತಿನಾಥಕ್ಕೆ ಯಾತ್ರೆ ಕೈಗೊಳ್ಳುವ ಹಿಂದುಗಳಿಗೆ ಸಬ್ಸಿಡಿಯನ್ನು ಪ್ರಕಟಿಸಿದ್ದರು. 2011ರಲ್ಲಿ ಕ್ರಿಸ್ ಮಸ್‌ಗೆ ಮುನ್ನ ಜೆರುಸಲೇಮ್ ಯಾತ್ರೆಯನ್ನು ಕೈಗೊಳ್ಳುವ ಕ್ರೈಸ್ತರಿಗೂ ಸಬ್ಸಿಡಿಯನ್ನು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News