ಡಾ. ಕಫೀಲ್ ಸಹೋದರನ ವಿರುದ್ಧ ವಂಚನೆ ಪ್ರಕರಣ ದಾಖಲು: ರಾಜಕೀಯ ಹಗೆತನ ಎಂದ ಕುಟುಂಬ
ಲಕ್ನೊ, ಜು.3: ಉತ್ತರ ಪ್ರದೇಶದ ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆಯ ವೈದ್ಯ ಡಾ. ಕಫೀಲ್ ಖಾನ್ ಸಹೋದರನ ವಿರುದ್ಧ ಪೊಲೀಸರು ಮಂಗಳವಾರ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಡಾ. ಕಫೀಲ್ ಖಾನ್ ಸಹೋದರ ಆದಿಲ್ ಖಾನ್ 2009ರಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯದಲ್ಲಿ ಖಾತೆಯನ್ನು ತೆರೆಯಲು ನಕಲಿ ಚಾಲನಾ ಪರವಾನಿಗೆಯನ್ನು ಬಳಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಆದಿಲ್ ಖಾನ್ ಜೊತೆ ಇತರ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಆರೋಪವನ್ನು ತಳ್ಳಿಹಾಕಿರುವ ಆದಿಲ್ ಖಾನ್, ತನ್ನ ಹಾಗೂ ತನ್ನ ಕುಟುಂಬ ಸದಸ್ಯರನ್ನು ವಂಚನೆ ಜಾಲದಲ್ಲಿ ಸಿಲುಕಿಸಲು ಸ್ಥಳೀಯ ಪೊಲೀಸರು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
“ನಾನು, ನನ್ನ ಕಿರಿಯ ಸಹೋದರ ಕಾಶಿಫ್ ಜಮೀಲ್‌ನ ಪ್ರಕರಣದ ಬಗ್ಗೆ ಉನ್ನತ ಅಧಿಕಾರಿಗಳಲ್ಲಿ ಮನವಿ ಮಾಡಿದ ನಂತರ ಪೊಲೀಸರು ನಮ್ಮ ಹಿಂದೆ ಬಿದ್ದಿದ್ದಾರೆ” ಎಂದು ಆದಿಲ್ ಆರೋಪಿಸಿದ್ದಾರೆ. ಕಾಶಿಫ್ ಮೇಲೆ ಕಳೆದ ತಿಂಗಳು ಗೋರಖ್‌ಪುರದಲ್ಲಿ ಆಗಂತುಕರು ಗುಂಡು ಹಾರಿಸಿದ್ದರು. “ಬನ್ಸ್‌ಗಾಂವ್‌ನ ಬಿಜೆಪಿ ಸಂಸದ ಕಮಲೇಶ್ ಪಾಸ್ವಾನ್‌ರ ಸೂಚನೆಯಂತೆ ನನ್ನ ಹಾಗೂ ನನ್ನ ಸಹೋದರರ ವಿರುದ್ಧ ಗೋರಖ್‌ಪುರ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರುಗಳು ದಾಖಲಾಗುವ ಸಾಧ್ಯತೆಯಿದೆ” ಎಂದು ಆದಿಲ್ ತಿಳಿಸಿದ್ದಾರೆ. ಗೋರಖ್‌ಪುರ ಆಸ್ಪತ್ರೆಯಲ್ಲಿ ಸಂಭವಿಸಿದ 63 ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿ ಎಪ್ರಿಲ್‌ನಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗೆ ಬಂದಿರುವ ಡಾ. ಕಫೀಲ್ ಖಾನ್ ನಂತರ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಕುಟುಂಬವು ಕಾಶಿಫ್ ಮೇಲಾಗಿರುವ ಗುಂಡಿನ ದಾಳಿಯ ಕುರಿತು ಚಿಂತಿತವಾಗಿದೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕುಟುಂಬವು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ರಲ್ಲಿ ಮನವಿ ಮಾಡಿದೆ.