×
Ad

ಉಸ್ತುವಾರಿ ಪೊಲೀಸ್ ಮಹಾನಿರ್ದೇಶಕರ ನೇಮಕ ಬೇಡ: ರಾಜ್ಯಗಳಿಗೆ ಸುಪ್ರೀಂ ಸೂಚನೆ

Update: 2018-07-03 20:16 IST

ಹೊಸದಿಲ್ಲಿ, ಜು.3: ದೇಶದಲ್ಲಿ ಪೊಲೀಸ್ ವ್ಯವಸ್ಥೆಯ ಸುಧಾರಣೆಯ ನಿಟ್ಟಿನಲ್ಲಿ ಹಲವು ಆದೇಶಗಳನ್ನು ನೀಡಿರುವ ಸುಪ್ರೀಂಕೋರ್ಟ್ ಯಾವುದೇ ಪೊಲೀಸ್ ಅಧಿಕಾರಿಗಳನ್ನು ಉಸ್ತುವಾರಿ ಪೊಲೀಸ್ ಮಹಾನಿರ್ದೇಶಕರೆಂದು ನೇಮಿಸಬಾರದು ಎಂದು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ)ನೇಮಕದ ಸಂದರ್ಭ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ಕ್ಕೆ ಕಳುಹಿಸುವಂತೆ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು ರಾಜ್ಯಗಳಿಗೆ ಸೂಚಿಸಿತು. ಈ ಹೆಸರುಗಳಲ್ಲಿ ಮೂವರು ಸೂಕ್ತ ಅಧಿಕಾರಿಗಳ ಹೆಸರನ್ನು ಯುಪಿಎಸ್‌ಸಿ ರಾಜ್ಯಗಳಿಗೆ ಕಳಿಸಲಿದ್ದು ಇದರಲ್ಲಿ ಒಬ್ಬರನ್ನು ನೇಮಕ ಮಾಡುವ ಅಧಿಕಾರ ರಾಜ್ಯಗಳಿಗೆ ಇರುತ್ತದೆ ಎಂದು ನ್ಯಾಯಪೀಠ ತಿಳಿಸಿದೆ. ಹೀಗೆ ನೇಮಕ ಮಾಡಿಕೊಳ್ಳುವ ಅಧಿಕಾರಿಗೆ ನ್ಯಾಯೋಚಿತ ಸೇವಾವಧಿ ಇರುವಂತೆ ರಾಜ್ಯ ಸರಕಾರ ಗಮನಿಸಬೇಕು ಎಂದು ನ್ಯಾಯಾಧೀಶರಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯಪೀಠ ತಿಳಿಸಿದೆ.

ಪೊಲೀಸ್ ಅಧಿಕಾರಿಗಳ ನೇಮಕದ ವಿಷಯದಲ್ಲಿ ರಾಜ್ಯಗಳ ಕಾನೂನನ್ನು ಅಮಾನತ್ತು ಇಡುವಂತೆ ನ್ಯಾಯಪೀಠ ತಿಳಿಸಿದೆ. ಅಲ್ಲದೆ ಪೊಲೀಸ್ ಅಧಿಕಾರಿಗಳ ನೇಮಕದ ಬಗ್ಗೆ ಕಾನೂನು ರೂಪಿಸಿರುವ ರಾಜ್ಯಗಳು ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಪೊಲೀಸ್ ವ್ಯವಸ್ಥೆ ಸುಧಾರಣೆಯ ಬಗ್ಗೆ ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ನೀಡಿರುವ ಆದೇಶದಲ್ಲಿ ಮಾರ್ಪಾಡು ಕೋರಿ ಕೇಂದ್ರ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಪೀಠ ಈ ಸೂಚನೆ ನೀಡಿದೆ.

2006ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶದಲ್ಲಿ ನೂತನ ಡಿಜಿಪಿಗಳ ನೇಮಕದ ಸಂದರ್ಭ ಅವರಿಗೆ ಎರಡು ವರ್ಷದ ನಿಗದಿತ ಸೇವಾವಧಿ ಇರುವಂತೆ ಗಮನಿಸಬೇಕು ಎಂದು ತಿಳಿಸಿತ್ತು. ಆದರೆ ಈ ಆದೇಶವನ್ನು ಸಂಬಂಧಿತ ಅಧಿಕಾರಿಗಳು ಜಾರಿಗೊಳಿಸಿಲ್ಲ ಎಂದು ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದು ಇದರ ತ್ವರಿತ ವಿಚಾರಣೆ ಕೋರಿದ್ದರು. 2006ರಲ್ಲಿ ಮಾಜಿ ಡಿಜಿಪಿಗಳಾದ ಪ್ರಕಾಶ್ ಸಿಂಗ್ ಹಾಗೂ ಎನ್.ಕೆ.ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಹಲವು ಸೂಚನೆಗಳನ್ನು ನೀಡಿತ್ತು.

 ಪೊಲೀಸರ ಮೇಲೆ ಸರಕಾರ ಅನಗತ್ಯ ಪ್ರಭಾವ ಬೀರದಂತೆ ಖಾತರಿಪಡಿಸಿಕೊಳ್ಳಲು ರಾಜ್ಯ ಭದ್ರತಾ ಆಯೋಗವನ್ನು ರಚಿಸಬೇಕೆಂದು ಸುಪ್ರೀಂ ತಿಳಿಸಿತ್ತು. ಡಿಜಿಪಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ಪಾರದರ್ಶಕವಾಗಿ ಮತ್ತು ಅರ್ಹತೆ ಆಧಾರದಲ್ಲಿ ನೇಮಿಸಬೇಕು ಮತ್ತು ಡಿಜಿಪಿ ಹಾಗೂ ಪೊಲೀಸ್ ಸುಪರಿಂಟೆಂಡೆಂಟ್‌ಗಳಿಗೆ ಕನಿಷ್ಟ 2 ವರ್ಷಗಳ ಕಾರ್ಯಾವಧಿ ಇರಬೇಕು. ತನಿಖೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯಗಳನ್ನು ಪ್ರತ್ಯೇಕಿಸಬೇಕು. ಪೊಲೀಸರ ವರ್ಗಾವಣೆ, ಭಡ್ತಿ ಹಾಗೂ ಸೇವೆಯ ಕುರಿತ ಇತರ ವಿಷಯಗಳ ಬಗ್ಗೆ ನಿರ್ಧರಿಸಿ ಶಿಫಾರಸು ಮಾಡಲು ಪೊಲೀಸ್ ಸಿಬ್ಬಂದಿ ಸಮಿತಿಯನ್ನು ರೂಪಿಸಬೇಕು. ಕಸ್ಟಡಿ ಸಾವಿನ ಪ್ರಕರಣ, ಪೊಲೀಸ್ ಕಸ್ಟಡಿಯಲ್ಲಿ ಅತ್ಯಾಚಾರ ನಡೆಸಿದ ಆರೋಪ ಅಥವಾ ವಿಚಾರಣೆ ಸಂದರ್ಭ ಗಂಭೀರ ಗಾಯಗೊಳ್ಳುವ ಪ್ರಕರಣ, ದುರ್ವರ್ತನೆ ಇತ್ಯಾದಿ ಆರೋಪಗಳು ಎಸ್‌ಪಿ ಅಥವಾ ಅದಕ್ಕಿಂತ ಉನ್ನತ ದರ್ಜೆಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕೇಳಿಬಂದಾಗ ಆ ಬಗ್ಗೆ ತನಿಖೆ ನಡೆಸಲು ಪೊಲೀಸ್ ದೂರುಗಳ ಪ್ರಾಧಿಕಾರವನ್ನು ರಚಿಸಲೂ ಸೂಚಿಸಲಾಗಿತ್ತು.

ಕೇಂದ್ರೀಯ ಪೊಲೀಸ್ ಸಂಸ್ಥೆಗಳ ಮುಖ್ಯಾಧಿಕಾರಿಗಳ ಆಯ್ಕೆ ಮತ್ತು ಕನಿಷ್ಟ ಎರಡು ವರ್ಷಾವಧಿಗೆ ಅವರ ನಿಯೋಜನೆಗೆ ಸಮಿತಿಯೊಂದನ್ನು ರಚಿಸುವ ಹಿನ್ನೆಲೆಯಲ್ಲಿ ಕೇಂದ್ರದ ಮಟ್ಟದಲ್ಲಿ ರಾಷ್ಟ್ರೀಯ ಭದ್ರತಾ ಆಯೋಗವನ್ನು ನೇಮಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು. ಈ ಎಲ್ಲಾ ಆದೇಶಗಳನ್ನು ಅನುಷ್ಠಾನಗೊಳಿಸಲಾಗಿಲ್ಲ ಎಂದು ದೂರಿ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇನ್ನಷ್ಟೇ ನಡೆಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News