ಶಿಕ್ಷಕಿಯರಿಂದ ಅವಮಾನಿತ 88 ಬಾಲಕಿಯರಿಗೆ ಪರಿಹಾರ ನೀಡುವಂತೆ ಅರುಣಾಚಲ ಸರಕಾರಕ್ಕೆ ಎನ್ ಎಚ್ ಆರ್ ಸಿ ಆದೇಶ

Update: 2018-07-03 14:55 GMT

ಹೊಸದಿಲ್ಲಿ,ಜು.3: ಕಳೆದ ವರ್ಷ ದಂಡನಾ ಕ್ರಮವಾಗಿ ತಮ್ಮ ಶಾಲಾ ಶಿಕ್ಷಕಿಯರಿಂದ ಬಲವಂತದಿಂದ ವಿವಸ್ತ್ರಗೊಳಿಸಲ್ಪಟ್ಟಿದ್ದ 88 ಬಾಲಕಿಯರಿಗೆ ತಲಾ 5,000 ರೂ.ಗಳ ಪರಿಹಾರ ಧನವನ್ನು ಪಾವತಿಸುವಂತೆ ರಾಷ್ಟ್ರೀಯ ಮಾವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ)ವು ಅರುಣಾಚಲ ಪ್ರದೇಶ ಸರಕಾರಕ್ಕೆ ನಿರ್ದೇಶ ನೀಡಿದೆ.

ಪಾಪಮ್ ಪಾರೆ ಜಿಲ್ಲೆಯ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ಆರು ಮತ್ತು ಏಳನೇ ತರಗತಿಗಳ ವಿದ್ಯಾರ್ಥಿನಿಯರು ತಮ್ಮ ಮುಖ್ಯ ಶಿಕ್ಷಕಿ ಮತ್ತು ಇನ್ನೋರ್ವ ವಿದ್ಯಾರ್ಥಿನಿಯ ವಿರುದ್ಧ ಕಾಗದದ ತುಂಡೊಂದರಲ್ಲಿ ಅಶ್ಲೀಲ ಶಬ್ದಗಳನ್ನು ಬರೆದಿದ್ದರೆಂಬ ಆರೋಪದಲ್ಲಿ ಕಳೆದ ವರ್ಷದ ನ.23ರಂದು ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿತ್ತು.

ಘಟನೆಯನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದ ಆಯೋಗವು ಅರುಣಾಚಲ ಪ್ರದೇಶ ಸರಕಾರ ಮತ್ತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ನೋಟಿಸ್‌ಗಳನ್ನು ಜಾರಿಗೊಳಿಸಿತ್ತು. ಮೂವರು ಶಿಕ್ಷಕಿಯರು ದಂಡನಾ ಕ್ರಮವಾಗಿ ಇಡೀ ಶಾಲೆಯ ಎದುರು ಈ ವಿದ್ಯಾರ್ಥಿನಿಯರ ಬಟ್ಟೆಗಳನ್ನು ಬಲವಂತದಿಂದ ಕಳಚಿಸಿದ್ದರು,ತನ್ಮೂಲಕ ಅವರ ಘನತೆಯನ್ನು ಕಿತ್ತುಕೊಂಡಿದ್ದರು ಎಂದಿರುವ ಆಯೋಗವು,ನಾಲ್ಕು ವಾರಗಳಲ್ಲಿ ತನ್ನ ಆದೇಶದ ಪಾಲನಾ ವರದಿಯನ್ನು ಮತ್ತು ಈ ಬಾಲಕಿಯರಿಗೆ ಪರಿಹಾರವನ್ನು ಪಾವತಿಸಿದ ಬಗ್ಗೆ ಪುರಾವೆಗಳನ್ನು ಸಲ್ಲಿಸುವಂತೆ ಅರುಣಾಚಲ ಸರಕಾರಕ್ಕೆ ಸೂಚಿಸಿದೆ. ತಾವು ಅಶ್ಲೀಲ ಶಬ್ದಗಳನ್ನು ಬರೆದಿದ್ದನ್ನು ಬಾಲಕಿಯರು ನಿರಾಕರಿಸಿದ್ದರೂ ಅವರನ್ನು ದಂಡಿಸಲಾಗಿತ್ತು ಎಂದು ಅದು ಬೆಟ್ಟು ಮಾಡಿದೆ.

ಶಾಲೆಯ ಮೂವರು ಶಿಕ್ಷಕಿಯರು ಅಮಾನವೀಯವಾಗಿ ಮತ್ತು ಕ್ರೂರವಾಗಿ ವರ್ತಿಸಿದ್ದರು ಎನ್ನುವುದನ್ನು ರಾಜ್ಯ ಸರಕಾರವು ದೃಢೀಕರಿಸಿದ ಬಳಿಕ ಆಯೋಗವು ಈ ನಿರ್ದೇಶವನ್ನು ಹೊರಡಿಸಿದೆ.

ವಿಚಾರಣೆಯ ಬಳಿಕ ಓರ್ವ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದ್ದು,ಇತರ ಇಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ . ಪೊಲೀಸರು ಈ ಬಗ್ಗೆ ಐಪಿಸಿ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರು ಶಿಕ್ಷಕಿಯರನ್ನು ಬಂಧಿಸಲಾಗಿದ್ದು,ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News