ಮಂಗಳೂರು: ಜು. 6ರಿಂದ ಲೆಕ್ಕಪರಿಶೊಧಕರ ರಾಷ್ಟ್ರೀಯ ಸಮ್ಮೇಳನ
ಮಂಗಳೂರು, ಜು. 3: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ (ಐಸಿಎಐ)ರಾಷ್ಟ್ರೀಯ ಸಮ್ಮೇಳನ ‘ಸ್ವಾಧ್ಯಾಯ ’ಜು. 6ಮತ್ತು 7ರಂದು ನಗರದ ಎಂ.ಜಿ.ರಸ್ತೆಯಲ್ಲಿರುವ ಟಿಎಂಎ ಪೈ ಅಂತಾರಾಷ್ಟ್ರೀಯ ಕನ್ವೆನ್ಯನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮಂಗಳೂರು ಶಾಖೆಯ ಅಧ್ಯಕ್ಷ ಶಿವಾನಂದ ಪೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ಎಲ್ಲಾ ಭಾಗಗಳಿಂದ 500ಕ್ಕೂ ಅಧಿಕ ಲೆಕ್ಕ ಪರಿಶೋಧಕರು, 400 ವಿದ್ಯಾರ್ಥಿಗಳು ಹಾಗೂ ಕೈಗಾರಿಕೋದ್ಯಮಿ ಗಳು ಭಾಗವಹಿಸಲಿದ್ದಾರೆ. ಜು. 6ರಂದು ಬೆಳಗ್ಗೆ 9.15ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು, ಬಳಿಕ ರಾಷ್ಟ್ರದ ಎಂದು ಮೇಧಾವಿಗಳು ಪ್ರಬಂಧ ಮಂಡಿಸಲಿದ್ದಾರೆ.
ಜುಲೈ 7ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಐಸಿಎಐ 1949 ಜುಲೈ 1ರಂದು ಸ್ಥಾಪನೆಯಾಗಿದ್ದು ದೇಶಾದ್ಯಂತ 163 ಶಾಖೆಗಳನ್ನು ಹಾಗೂ ವಿದೇಶದಲ್ಲಿ 30 ಶಾಖೆಗಳನ್ನು ಹೊಂದಿರುವ ಶಾಸನ ಬದ್ಧವಾದ ಸಂಸ್ಥೆಯಾಗಿದ್ದು, ಮಂಗಳೂರು ಶಾಖೆ 1971ರಲ್ಲಿ ಸ್ಥಾಪನೆಯಾಗಿದೆ. ದಕ್ಷಿಣ ಕನ್ನಡ , ಕಾಸರಗೋಡು ಸೇರಿದಂತೆ 600ಕ್ಕೂ ಮಿಕ್ಕಿ ಸದಸ್ಯರು ಮಂಗಳೂರು, ಪುತ್ತೂರು, ಸುಳ್ಯ, ಮಡಿಕೇರಿ , ಮೂಡುಬಿದಿರೆ ಮತ್ತು ಕಾಸರಗೋಡಿನಲ್ಲಿ ವೃತ್ತಿಪರರಾಗಿ ಮತ್ತು ಕೆಲವರು ಬ್ಯಾಂಕ್ ಉದ್ಯಮದಲ್ಲಿ ಸಕ್ರೀಯರಾಗಿದ್ದಾರೆ. 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಂಗಳೂರು ಶಾಖೆಯ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ದೇಶದ ತೆರಿಗೆ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆಯೆನ್ನಬಹುದಾದ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ ) ಜಾರಿಯಾದ ಬಳಿಕ ಅದರ ತಂತ್ರಜ್ಞಾನ ಆಧಾರಿತ ಜಾರಿಯೂ ಲೆಕ್ಕಪರಿಶೊಧಕರ ವೃತ್ತಿಗೆ ದೊಡ್ಡ ಸವಾಲಿಗಿದೆ ಈ ನಿಟ್ಟಿನಲ್ಲಿ ಸಮ್ಮೇಳನ ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ಶಿವಾನಂದ ಪೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಭಾರ್ಗವ ತಂತ್ರಿ,ಕಾರ್ಯದರ್ಶಿ ರವಿ ರಾಜ್ ಬಿ, ಆಡಳಿತ ಸಮಿತಿಯ ಸದಸ್ಯರಾದ ಇಡೆಲ್‌ಲ್ ಡಿ ಸಿಲ್ವ ಮೊದಲಾದವರು ಉಪಸ್ಥಿತರಿದ್ದರು.