ಕರ್ನಾಟಕ ಕೊಳಚೆ ಅಭಿವೃದಿ ನಿಗಮದಿಂದ ಉಡುಪಿನಗರಕ್ಕೆ 500 ಮನೆಗಳು ಮಂಜೂರು
ಉಡುಪಿ, ಜು.3: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಪ್ರಯತ್ನದ ಫಲವಾಗಿ ಕರ್ನಾಟಕ ಕೊಳಚೆ ಅಭಿವೃದ್ಧಿ ನಿಗಮದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2016-17ನೇ ಸಾಲಿನಲ್ಲಿ ಉಡುಪಿ ನಗರದ ಕೊಳಚೆ ಪ್ರದೇಶಗಳಿಗೆ ಒಟ್ಟು 500 ಮನೆಗಳು ಮಂಜೂರಾಗಿವೆ ಎಂದು ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ನಗರದ ಕೊಡವೂರು ಪಾಳೆಕಟ್ಟೆಯಲ್ಲಿ 92, ಕೊಳ ವಾರ್ಡಿನ ಬಲರಾಮ ನಗರದಲ್ಲಿ 130, ಕೊಡಂಕೂರು ನ್ಯೂ ಕಾಲನಿಯಲ್ಲಿ 158, ನಿಟ್ಟೂರು ವಾರ್ಡಿನ ವಿಷ್ಣುಮೂರ್ತಿನಗರದಲ್ಲಿ 120 ಸೇರಿ ಒಟ್ಟು 500 ಮನೆಗಳನ್ನು ನಿರ್ಮಿಸುವ ಯೋಜನೆ ರಾಜ್ಯ ಸರಕಾರದಿಂದ ಮಂಜೂರುಗೊಂಡಿದೆ. ಈಗಾಗಲೇ ಫಲಾನುಭವಿಗಳನ್ನು ಸಹ ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತಲಾ 400 ಚದರ ಅಡಿಯ ಒಟ್ಟು 5.15 ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗುತ್ತದೆ. ಪ್ರತಿ ಮನೆ ಕಟ್ಟಲು ಪ.ಜಾತಿ ಮತ್ತು ಪ.ಪಂಗಡದವರಿಗೆ ಕೇಂದ್ರ ಸರಕಾರದ ಪಾಲು 1,50,000ರೂ., ರಾಜ್ಯ ಸರಕಾರದ ಪಾಲು ರೂ. 1,80,000 ಹಾಗೂ ಫಲಾನುಭವಿಯ ಪಾಲು 51,536 ರೂ.ಆಗಿದ್ದು, ಬ್ಯಾಂಕ್ ಸಾಲ 1,33,828 ರೂ. ಸೇರಿ ಒಟ್ಟು ಪ್ರತಿ ುನೆಗೆ 5,15,364 ರೂ. ಆಗುತ್ತದೆ.
ಇತರ ವರ್ಗದವರಿಗೆ ಕೇಂದ್ರ ಸರಕಾರದ ಪಾಲು 1,50,000ರೂ., ರಾಜ್ಯ ಸರಕಾರದ ಪಾಲು 1,20,000 ರೂ., ಫಲಾನುಭವಿಯ ಪಾಲು 77,305 ರೂ. ಹಾಗೂ ಬ್ಯಾಂಕ್ ಸಾಲ 1,68,059 ರೂ. ಸೇರಿ ಒಟ್ಟು 5,15,364 ರೂ. ಆಗಿರುತ್ತದೆ. ನಾಲ್ಕು ಕಡೆಗಳಲ್ಲೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸುಮೂರು 2.29 ಕೋಟಿ ರೂ. ಹಣವನ್ನು ಮಿಸಲಿಡಲಾಗಿದೆ.
ಈಗಾಗಲೇ ಕೊಳಚೆ ಅಭಿವೃದ್ಧಿ ನಿಗಮ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದಾರೆ ಎಂದು ಮೀನಾಕ್ಷಿ ಮಾಧವ ಬನ್ನಂಜೆ ಇವರ ಪ್ರಕಟಣೆ ತಿಳಿಸಿದೆ.