ನಿಪಾಹ್ ವೈರಸ್ ಹಬ್ಬಲು ಬಾವಲಿ ಕಾರಣ: ಐಎಂಸಿಆರ್ ವರದಿ

Update: 2018-07-03 15:06 GMT

ಹೊಸದಿಲ್ಲಿ, ಜು.3: ಕೇರಳದಲ್ಲಿ ಆತಂಕ ಹುಟ್ಟಿಸಿದ್ದ ಮತ್ತು ಕೋಝಿಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ 17 ಜನರ ಸಾವಿಗೆ ಕಾರಣವಾಗಿದ್ದ ನಿಪಾಹ್ ರೋಗದ ವೈರಸ್ ಹಬ್ಬಲು ಬಾವಲಿಯೇ ಮೂಲ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಎಂಸಿಆರ್) ದೃಢಪಡಿಸಿದೆ. ನಿಪಾಹ್ ವೈರಸ್‌ನ ಪ್ರಥಮ ಪ್ರಕರಣ ಹಾಗೂ ಪ್ರಥಮ ಸಾವಿನ ಪ್ರಕರಣ ದಾಖಲಾಗಿರುವ ಕೋಝಿಕೋಡ್‌ನ ಪೆರಂಬ್ರದಲ್ಲಿರುವ ಚಂಗರೋಥ್ ಗ್ರಾಮದಲ್ಲಿ ಕಂಡುಬರುವ ಬಾವಲಿಗಳನ್ನು ಕಳೆದ ಮೇ ತಿಂಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿತ್ತು. ಇದೀಗ ಎರಡನೇ ಬಾರಿ ನಡೆಸಲಾಗಿರುವ ಪರೀಕ್ಷೆಯಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿದ್ದು, ಹಣ್ಣು ತಿಂದು ಬದುಕುವ ಬಾವಲಿಗಳೇ ಕಾರಣ ಎಂದು ದೃಢಪಟ್ಟಿರುವುದಾಗಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ತಿಳಿಸಿದ್ದಾರೆ. ಚಂಗರೋಥ್ ಗ್ರಾಮದಲ್ಲಿ ಕಂಡು ಬರುವ ಬಾವಲಿಗಳು ನಿಪಾಹ್ ವೈರಸ್ ಹರಡುತ್ತಿರುವ ಬಗ್ಗೆ ವಿಜ್ಞಾನಿಗಳು ನಿರ್ಣಾಯಕ ಸಾಕ್ಷ ಸಂಗ್ರಹಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

 ಮೇ ತಿಂಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದ ಬಾವಲಿಗಳು ಬೇರೆ ತಳಿಗೆ ಸೇರಿದ್ದ ಕಾರಣ ನಿಪಾಹ್ ಸೋಂಕಿಗೆ ಕಾರಣವಾಗುವ ಝೂನೋಟಿಕ್ ವೈರಸ್ ಪತ್ತೆಯಾಗಿರಲಿಲ್ಲ. ಆದರೆ ಎರಡನೇ ಪರೀಕ್ಷೆಯ ಸಂದರ್ಭ ಹಣ್ಣು ತಿಂದು ಬದುಕುವ ಬಾವಲಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಖಚಿತ ಫಲಿತಾಂಶ ದೊರಕಿದೆ. ಪ್ರಥಮ ಹಂತದಲ್ಲಿ ಪರೀಕ್ಷೆ ನಡೆಸಲಾದ 21 ಬಾವಲಿಗಳಲ್ಲಿ ನಿಪಾಹ್ ಸೋಂಕಿನ ವೈರಸ್ ಪತ್ತೆಯಾಗಿಲ್ಲ. ಆದರೆ ದ್ವಿತೀಯ ಹಂತದಲ್ಲಿ ಪರೀಕ್ಷೆ ನಡೆಸಲಾದ 55 ಬಾವಲಿಗಳಲ್ಲಿ ನಿಪಾಹ್ ಸೋಂಕಿನ ವೈರಸ್ ಪತ್ತೆಯಾಗಿದೆ ಎಂದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಹಲವು ವಿಧದ ಬಾವಲಿಗಳಿದ್ದು, ಹಣ್ಣು ತಿಂದು ಬದುಕುವ ‘ಫ್ರುಟ್ಸ್ ಬಾವಲಿಗಳು’ ದೇಶದಾದ್ಯಂತ ಕಂಡುಬರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News