ಇಸ್ಲಾಮಿನ ತತ್ವ ಆದರ್ಶ ಮೈಗೂಡಿಸಿಕೊಂಡು ಬದುಕುವುದೇ ಸಂಪತ್ತು: ಅಬೂಬಕರ್ ಸಿದ್ದೀಕ್ ಜಲಾಲಿ
ಬಂಟ್ವಾಳ, ಜು. 3: ಜೀವನದಲ್ಲಿ ಸಂಪತ್ತು ಮುಖ್ಯವಲ್ಲ, ಇಸ್ಲಾಮಿನ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕುವುದೇ ನಮ್ಮ ಸಂಪತ್ತು ಆಗಿದೆ. ಒಂದು ಮಹಿಳೆ ಧಾರ್ಮಿಕ ಶಿಕ್ಷಣ ಪಡೆದಾಗ ಇಡೀ ಒಂದು ಕುಟುಂಬ ಕಲಿತಂತೆ ಎಂದು ಪುತ್ತೂರು ಖತೀಬ್ ಅಬೂಬಕರ್ ಸಿದ್ದೀಕ್ ಜಲಾಲಿ ಹೇಳಿದ್ದಾರೆ.
ವಿಟ್ಲದ ಮೇಗಿನಪೇಟೆ ಅಲ್‌ಖೈರ್ ಮಹಿಳಾ ಶರೀಯತ್ ಕಾಲೇಜಿನ ಪ್ರಾರಂಭೋತ್ಸವದಲ್ಲಿ ಮುಖ್ಯ ಪ್ರಭಾಷಣ ಮಾಡಿದ ಅವರು, ಶಿಕ್ಷಣ ಪಡೆದ ಮಹಿಳೆ ಇತರರಿಗೆ ನೇತೃತ್ವ ವಹಿಸಬೇಕು. ಶಿಕ್ಷಕರನ್ನು ಹೆತ್ತರವರನ್ನು ಗೌರವಿಸಬೇಕು. ಮಹಿಳೆಯರಿಗೆ ಒಂದು ಕುಟುಂಬವನ್ನು ಮುನ್ನಡೆಸುವ ಸಾಮಾರ್ಥ್ಯ ಇದೆ. ತಂದೆ-ತಾಯಿಯನ್ನು ನೋಯಿಸಿದರೆ ಅದಕ್ಕೆ ಪರಿಹಾರವಿಲ್ಲ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಶರೀಯತ್ ಕಾಲೇಜಿನಲ್ಲಿ ಇಸ್ಲಾಮಿನ ನೈಜ ಆದರ್ಶಗಳನ್ನು ಕಲಿಸಿಕೊಡುವುದರ ಜೊತೆಗೆ ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅಬ್ದುರ್ರಹ್ಮಾನ್ ಫೈಝಿ ಪರ್ತಿಪ್ಪಾಡಿ ಮಾತನಾಡಿ, ಮಹಿಳೆಯರು ಧಾರ್ಮಿಕ ಶಿಕ್ಷಣ ಪಡೆದಾಗ ಕುಟುಂಬ ಬಲಿಷ್ಠಗೊಳ್ಳುತ್ತದೆ. ಬೌದ್ಧಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ ಅವಶ್ಯ ಎಂದು ಹೇಳಿದರು. ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಅಬ್ದುಲ್ ಸಲಾಂ ಲತೀಫಿ ದುವಾಃ ಆಶೀರ್ವಚನ ನೀಡಿದರು. ಅಲ್ ಖೈರ್ ಶರೀಯತ್ ಕಾಲೇಜಿನ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು.
ಅಬ್ಬಾಸ್ ದಾರಿಮಿ ಕೆಲಿಂಜ ಹಾಗೂ ಇಬ್ರಾಹಿಂ ಫೈಝಿ ಪ್ರಾಸ್ತಾವಿಸಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ಗಫೂರ್ ಹನೀಫಿ, ಕಾಲೇಜು ಆಡಳಿತ ಸಮಿತಿ ಸದಸ್ಯರಾದ ಇಬ್ರಾಹಿಂ ಹಾಜಿ, ಮಹಮ್ಮದ್ ಅಲಿ ವಿಟ್ಲ, ಹಮೀದ್ ಕುದ್ದುಪದವು ಉಪಸ್ಥಿತರಿದ್ದರು. ಅಬ್ದುಲ್ ಹಕೀಂ ಅರ್ಶದಿ ಸ್ವಾಗತಿಸಿದರು. ರಫೀಕ್ ಪೊನ್ನೋಟ್ಟು ವಂದಿಸಿದರು.