ಪತ್ರಿಕಾ ದಿನಾಚರಣೆ: ವಿಶೇಷ ಶಾಲೆಯ ಪ್ರಾಂಶುಪಾಲೆ ಮಾಲತಿ ಉದ್ಯಾವರ್ ಗೆ ಸನ್ಮಾನ
ಭಟ್ಕಳ, ಜು. 3: ಪತ್ರಿಕಾ ದಿನಾಚರಣೆ ಅಂಗವಾಗಿ ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಇಲ್ಲಿನ ವಿಶೇಷ ಶಾಲೆಯ ಪ್ರಾಂಶುಪಾಲೆ ಮಾಲತಿ ಉದ್ಯಾವರ್ ರನ್ನು ಸನ್ಮಾನಿಸಿ ಗೌರವಿಸಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜೀವನದಲ್ಲಿ ಪ್ರತಿ ಬಾರಿ ಸೋಲನ್ನೇ ಕಾಣುತ್ತ ಅವೆಲ್ಲವನ್ನು ಈ ಮಕ್ಕಳ ನಗುವಿನಿಂದ ಮರೆಯುತ್ತಿದ್ದೇನೆ. ಈ ರೀತಿಯ ಮಕ್ಕಳ ಪಾಲನೆ ಪೋಷಣೆಯನ್ನು ತಾಳ್ಮೆ, ಪ್ರೀತಿಯಿಂದ ಮಾಡಿದರೆ ಮಾತ್ರ ಅವರಲ್ಲಿ ಬದಲಾವಣೆ ಸಾಧ್ಯ ಎಂದರು.
ಕೇವಲ 4 ಮಕ್ಕಳಿಂದ ಆರಂಭಗೊಂಡ ಶಾಲೆ ಇದಾಗಿದ್ದು, ಈಗ ಸದ್ಯ ಒಂದು ಕಟ್ಟಡದಲ್ಲಿ ನಡೆಸಿಕೊಂಡು ಹೋಗುತ್ತಿದ್ದೇನೆ. ತುಂಬಾ ಕಷ್ಟದ ಸಂದರ್ಭಗಳಲ್ಲಿ ಸೋಲು, ಅವಮಾನವನ್ನು ಅನುಭವಿಸಿದ್ದರು ಮಕ್ಕಳಿಗಾಗಿ ಶಾಲೆ ಮಾಡಿಯೇ ತೀರಬೇಕೆಂಬ ಛಲದಿಂದ ಮುಂದುವರೆಯುತ್ತಿದ್ದೇನೆ. ಆರಂಭದ ದಿನದಲ್ಲಿ ಇಲ್ಲಿ ಬೇರೆ ಯಾವುದಾದರು ಈ ರೀತಿಯ ಶಾಲೆ ಆರಂಭಗೊಂಡಿದ್ದು ಅವರನ್ನು ಸರಿಯಾಗಿ ನೋಡುಕೊಳ್ಳುತ್ತಿದ್ದರೆ ಆ ಶಾಲೆಗೆ ಅವರನ್ನು ಕಳುಹಿಸುತ್ತಿದ್ದೆ. ಆದರೆ ಒಂದು ಶಾಲೆಯನ್ನು ನಡೆಸುವುದು ಕಷ್ಟ ಸಾಧ್ಯ ಎಂದರು.
ಈ ಮಕ್ಕಳ ಪಾಲಕರಿಗೆ ಮಕ್ಕಳ ಬಗ್ಗೆ ಪ್ರೀತಿ ಇರಬೇಕು. ಇವರು ಎಲ್ಲರಂತಾಗಲು ಅವರ ಪ್ರಯತ್ನವೂ ಬೇಕಾಗುತ್ತದೆ. ಈ ಶಾಲೆಯ ಮಕ್ಕಳು ಒಲಂಪಿಕ್ಸನಲ್ಲಿ ರಾಜ್ಯ ರಾಷ್ಟ್ರಕ್ಕೆ ಹೋಗಿದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ಪಾಲಕರ ಸಹಕಾರವಿಲ್ಲದೇ ವಾಪಸ್ಸು ಬಂದಿದ್ದೇವು. ಆದರೆ 2020ರ ಒಲಿಂಪಿಕ್ಸ್ ನಲ್ಲಿ ಶಾಲೆಯಿಂದ 10 ಮಕ್ಕಳನ್ನು ಕರೆದುಕೊಂಡು ಹೋಗುವಂತೆ ತಯಾರಿ ಮಾಡುತ್ತಿದ್ದೇನೆ ಎಂದ ಅವರು ಶಾಲೆಯ ಎಲ್ಲಾ ಮಕ್ಕಳಿಗೆ ಶತ ಪ್ರಯತ್ನ ಮಾಡಿ ಸರಕಾರದಿಂದ 3 ಸಾವಿರ ಬರುವಂತೆ ಅನೂಕುಲ ಮಾಡಿಕೊಟ್ಟಿದ್ದೇನೆ ಎಂದರು.
ಪತ್ರಕರ್ತರ ಬೆಂಬಲದೊಂದಿಗೆ ಶಾಲೆ ಚೆನ್ನಾಗಿ ನಡೆದುಕೊಂಡು ಹೋಗುತ್ತಿದ್ದು, ಅವರ ಸಹಕಾರವನ್ನು ಯಾವತ್ತು ಮರೆಯುವಂತಿಲ್ಲ. ಇಂತಹ ಸನ್ಮಾನ ನನಗೆ ಸಿಕ್ಕಿದ್ದು ಸಂತಸವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಬಿಜೆಪಿ ಮಹಿಳಾ ಮುಖಂಡೆ ಶಿವಾನಿ ಶಾಂತಾರಾಮ ಮಾತನಾಡಿ, ಸಾಮಾಜಿಕ ಕಳಕಳಿ ಇರುವ ಪತ್ರಕರ್ತರು ಸಮಾಜಮುಖಿ ಕೆಲಸದಲ್ಲಿ ಅದು ಇಂತಹ ವಿಶೇಷ ಮಕ್ಕಳ ಪೋಷಣೆ ಮಾಡುತ್ತಿರುವ ಶಾಲೆಯ ಸ್ಥಾಪಕಿಗೆ ಸನ್ಮಾನ ಮಾಡಿರುವುದು ಸಂತಸವಾಗಿದೆ. ಸಾಮಾನ್ಯ ಮಕ್ಕಳನ್ನೇ ಸಾಕಲು ಕಷ್ಟ ಸಾಧ್ಯದ ದಿನದಲ್ಲಿ ಇಂತಹ ವಿಶೇಷ ಮಕ್ಕಳ ಪಾಲನೆ ಪೋಷಣೆ ಮಡುತ್ತಿರುವ ಇವರ ಸೇವೆ ಶ್ರೇಷ್ಠವಾಗಿದೆ. ಇವರಿಗೆ ಸನ್ಮಾನಿಸುವ ಭಾಗ್ಯ ನನ್ನದಗಿದ್ದು ಸಂತೋಷವಾಗಿದೆ. ಮುಂದಿನ ದಿನದಲ್ಲಿ ಶಾಲೆಯ ಅಭಿವೃದ್ಧಿಗೆ ನನ್ನಿಂದಾಗುವ ಸಹಾಯ ಮಾಡಲು ಸಿದ್ಧ ಎಂದರು.
ರಾಜ್ಯ ಕಾರ್ಯಕಾರಣಿ ಸದಸ್ಯ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ರಾಘವೇಂದ್ರ ಹೆಬ್ಬಾರ್, ತಾಲೂಕಾ ಸಂಘದ ಕಾರ್ಯದರ್ಶಿ ಭಾಸ್ಕರ ನಾಯ್ಕ, ಉಪಸ್ಥಿತರಿದ್ದರು. ಉಪಾಧ್ಯಕ್ಷ ಎಂ.ಆರ್.ಮಾನ್ವಿ ವಂದಿಸಿದರು.